ಪ್ರಧಾನಿ ಮೋದಿ ವಿರುದ್ಧ ಸೋಶಿಯಲ್​ ಮೀಡಿಯಾ ಪೋಸ್ಟ್‌: ಕಲಾವಿದನ ವಿರುದ್ಧ ಬಿಜೆಪಿ ದೂರು

ಪೊಲೀಸ್ ಅಧಿಕಾರಿಗಳು ಕಾನೂನು ತಜ್ಞರ ಜೊತೆ ಚರ್ಚಿಸಿ ಎಫ್‌ಐಆರ್ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ.;

Update: 2025-06-17 06:05 GMT

ಕಲಾವಿದ ಟಿ.ಎಫ್. ಹಾದಿಮನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಮುಖಂಡರು ಯಶವಂತಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಪಕ್ಷದ ರಾಜ್ಯ ವಕ್ತಾರ ಮತ್ತು ವಕೀಲ ವೆಂಕಟೇಶ ದೊಡ್ಡೇರಿ ಅವರು ಈ ದೂರು ನೀಡಿದ್ದಾರೆ.

"ಹಾದಿಮನಿ ಅವರು ನರೇಂದ್ರ ಮೋದಿ ಅವರಿಗೆ ಅವಮಾನ ಆಗುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾದಿಮನಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಬೇಕು" ಎಂದು ದೂರಿನಲ್ಲಿ ಕೋರಲಾಗಿದೆ.

ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, "ಮೋದಿ ಅವರ ಬಗ್ಗೆ ಕೋಟ್ಯಂತರ ಜನರು ಗೌರವ-ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ. ಮೋದಿಯವರ ಚಾರಿತ್ರ್ಯವಧೆ ಮಾಡುವ ಹಾದಿಮನಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದೂರು ನೀಡಲಾಗಿದೆ" ಎಂದು ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಕಾನೂನು ತಜ್ಞರ ಜೊತೆ ಚರ್ಚಿಸಿ ಎಫ್‌ಐಆರ್ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ.

Tags:    

Similar News