ಸ್ಮಾರ್ಟ್‌ ಮೀಟರ್‌ ಹಗರಣ: ಸಚಿವ ಕೆ.ಜೆ. ಜಾರ್ಜ್‌ ವಜಾಕ್ಕೆ ಆಗ್ರಹ

ಸಿಎಂ ಸಿದ್ದರಾಮಯ್ಯನವರ ಕಿರೀಟಕ್ಕೆ ಈ ಭ್ರಷ್ಟಾಚಾರ ಹಗರಣವು ಮತ್ತೊಂದು ಹೊಸ ಗರಿಯಂತಿದೆ. 15 ಸಾವಿರ ಕೋಟಿ ಎಂದರೆ ಸಣ್ಣ ಮೊತ್ತವಲ್ಲ. ಈ ಕುರಿತು ಮುಖ್ಯಮಂತ್ರಿ ಉತ್ತರಿಸಬೇಕು.;

Update: 2025-07-24 15:01 GMT

ಶಾಸಕ ಡಾ. ಸಿ. ಎನ್‌. ಅಶ್ವಥ್‌ ನಾರಾಯಣ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌

ಸ್ಮಾರ್ಟ್ ಮೀಟರ್ ಹಗರಣದ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಿಎಂ ಸಿದ್ದರಾಮಯ್ಯನವರು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಕಿರೀಟಕ್ಕೆ ಈ ಭ್ರಷ್ಟಾಚಾರ ಹಗರಣವು ಮತ್ತೊಂದು ಹೊಸ ಗರಿಯಂತಿದೆ. 15 ಸಾವಿರ ಕೋಟಿ ಎಂದರೆ ಸಣ್ಣ ಮೊತ್ತವಲ್ಲ. ಈ ಕುರಿತು ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಒತ್ತಾಯಿಸಿದರು. 

ಈ ಆರೋಪದ ಹಿಂದೆ ಯಾವುದೇ ದ್ವೇಷ, ವೈಮನಸ್ಸಿಲ್ಲ. ಜನರ ಹಿತ ಕಾಪಾಡಲು ಸದನದಲ್ಲೂ ಇದನ್ನು ಗಮನ ಸೆಳೆಯುವ ಪ್ರಶ್ನೆ ಮೂಲಕ ಪ್ರಸ್ತಾಪಿಸಿದ್ದೇವೆ. ಆದರೆ, ಅವರು ಸಮರ್ಪಕ ಉತ್ತರ ನೀಡಿಲ್ಲ. ಅರ್ಹತೆ ಇಲ್ಲದ ಗುತ್ತಿಗೆದಾರನಿಗೆ ಹಾಗೂ ಕಪ್ಪು ಪಟ್ಟಿಗೆ ಸೇರಿಸಿರುವ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ನಿಯಮಾವಳಿ ಉಲ್ಲಂಘನೆ ಮಾಡಿ ಸ್ಮಾರ್ಟ್‌ ಮೀಟರ್‌ಗೆ  ಗರಿಷ್ಠ ದರ ನಿಗಧಿಪಡಿಸಿ ಕಡ್ಡಾಯ ಮಾಡಿದ್ದಾರೆ ಎಂದರು.

ಹಗಲು ದರೋಡೆ ಯತ್ನ

ಸ್ಮಾರ್ಟ್‌ ಮೀಟರ್‌ ಯೋಜನೆಯಲ್ಲಿ ಸರ್ಕಾರ ಹಗಲು ದರೋಡೆ ಮಾಡಲು ಹೊರಟಿದೆ. ಏಪ್ರಿಲ್‌ನಲ್ಲೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಚುನಾಯಿತ ಜನ ಪ್ರತಿನಿಧಿಗಳ ಕ್ರಿಮಿನಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. 

ಮಾನ್ಯ ರಾಜ್ಯಪಾಲರಿಗೂ ಅರ್ಜಿ ನೀಡಲಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೇಳಿದ್ದೇವೆ. ಖಾಸಗಿ ದೂರು ನೀಡಲು ಒಪ್ಪಿಗೆ ಲಭಿಸಿದೆ. ಬುಧವಾರ(ಜು.23) ಇದರ ಮೌಖಿಕ ಆದೇಶ ಸಿಕ್ಕಿದ್ದು ಲೋಕಾಯುಕ್ತರಿಗೂ ತಿಳಿಸಲು ಸೂಚಿಸಿದ್ದಾರೆ ಎಂದರು.

ಸದನದಲ್ಲೂ ಹೋರಾಟ

ಖಾಸಗಿ ದೂರು ದಾಖಲಾದ ಮೇಲಾದರೂ ರಾಜೀನಾಮೆ ಕೊಡುವಿರಾ ಜಾರ್ಜ್ ಅವರೇ ಎಂದು ಪ್ರಶ್ನಿಸಿದ ಅವರು, ನ್ಯಾಯಕ್ಕೆ ತಲೆ ಬಾಗುವುದಾಗಿ ಹೇಳಿದವರು ತಕ್ಷಣ ರಾಜೀನಾಮೆ ಕೊಡಲಿ. ಸದನದಲ್ಲೂ ಈ ವಿಚಾರದ ಕುರಿತು ಹೋರಾಟ ಮಾಡುವ ಬಗ್ಗೆ ಪ್ರತಿಪಕ್ಷ ನಾಯಕರ ಜತೆ ಸಮಾಲೋಚನೆ ಮಾಡಲಾಗುವುದು ಎಂದರು.

Tags:    

Similar News