ಕೇವಲ ಶಾಸಕರ ಕಷ್ಟವಲ್ಲ, ಪಾಲಿಕೆ ನೌಕರರ ಸಮಸ್ಯೆಗಳನ್ನು ಬಗೆಹರಿಸಿ: ಎಚ್‌ಡಿಕೆ
ಶಾಸಕರ ಬಂಡಾಯ ತಣಿಸಲು ಹಾಗೂ ಪಕ್ಷದಲ್ಲಿನ ಬೇಗುದಿಯನ್ನು ಕಡಿಮೆ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಮಯವೇ ಸಾಲುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.;
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ
ರಾಜ್ಯ ಸರ್ಕಾರ ಕೇವಲ ಶಾಸಕರ ದುಃಖ, ದುಮ್ಮಾನ ಕೇಳಿದರೆ ಸಾಲದು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪಾಲಿಕೆಗಳ ನೌಕರರ ಕಷ್ಟಗಳನ್ನು ಆಲಿಸುವ ಹೃದಯವಂತಿಕೆ ತೋರಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪಾಲಿಕೆಗಳ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಗಮನ ಹರಿಸಬೇಕು. ಆದರೆ, ಶಾಸಕರ ಬಂಡಾಯ ತಣಿಸುವುದಕ್ಕೆ ಹಾಗೂ ಪಕ್ಷದಲ್ಲಿನ ಬೇಗುದಿಯನ್ನು ಕಡಿಮೆ ಮಾಡಲು ಸಿಎಂ ಹಾಗೂ ಡಿಸಿಎಂಗೆ ಸಮಯವೇ ಸಾಲುತ್ತಿಲ್ಲ. ಇದನ್ನು ತಪ್ಪು ಎನ್ನಲಾರೆ. ಆದರೆ, ಪಾಲಿಕೆ ನೌಕರರು ಎಸಗಿದ ಪಾಪವೇನು ಎಂದು ಪ್ರಶ್ನಿಸಿದ್ದಾರೆ.
ನೌಕರರ ಬದುಕಿಗೂ ಗ್ಯಾರಂಟಿ ನೀಡಿ
ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಳಂಬ ಧೋರಣೆ ಏಕೆ? ಸ್ವತಃ ಮುಖ್ಯಮಂತ್ರಿ ಅವರೇ ಮಾನವೀಯ ನೆಲೆಗಟ್ಟಿನಲ್ಲಿ ತಕ್ಷಣವೇ ಕ್ರಮ ವಹಿಸಬೇಕು. ಹಗಲಿರುಳು ಸಾರ್ವಜನಿಕರಿಗಾಗಿ ದುಡಿಯುವ ಪಾಲಿಕೆ ನೌಕರರ ಬದುಕಿಗೂ ಸರ್ಕಾರ ಗ್ಯಾರಂಟಿ ಕೊಡಬೇಕು. ಪಾಲಿಕೆಗಳ ನಿತ್ಯದ ಯಾವ ಕೆಲಸ ಕಾರ್ಯಗಳು ನಿಲ್ಲಬಾರದು. ಸ್ವಚ್ಛತೆ, ನೈರ್ಮಲ್ಯ ಹಾಗೂ ಸ್ಥಳೀಯ ಆಡಳಿತದ ದೃಷ್ಟಿಯಿಂದ ಪಾಲಿಕೆಗಳು ಮಹತ್ವ ಹೊಂದಿವೆ ಎಂದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ವೃಂದ ಹಾಗೂ ನೇಮಕಕ್ಕೆ ತಿದ್ದುಪಡಿ, ಏಳನೇ ವೇತನ ಆಯೋಗದ ನಿಯಮಗಳನ್ನು ಪಾಲಿಕೆ ನೌಕರರಿಗೂ ಯಥಾವತ್ತಾಗಿ ವಿಸ್ತರಿಸುವುದು, ಪ್ರತಿ ವರ್ಷ ಕೀಡಾಕೂಟ ನಡೆಸುವುದು, ಕೆಜಿಐಡಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ ಎರಡು ದಿನಗಳಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ವಿವಿಧ ಪಾಲಿಕೆಗಳ ನೌಕರರು ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಉಳಿದ ಪಾಲಿಕೆಗಳಾದ ದಾವಣಗೆರೆ, ಶಿವಮೊಗ್ಗ, ಮಂಗಳೂರು, ಮೈಸೂರು, ತುಮಕೂರು, ವಿಜಯಪುರ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಬಳ್ಳಾರಿ ಪಾಲಿಕೆ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಇದುವರೆಗೂ ಸಚಿವರಾಗಲಿ, ಅಧಿಕಾರಿಗಳಾಗಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.