ಪ್ರವರ್ಗ-1ಕ್ಕೆ ಹಳ್ಳಿಕಾರ ಸಮುದಾಯ | ಜಾತಿ ಗಣತಿಯೇ ಆಧಾರ
ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3A ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಸಮಾಜದಲ್ಲಿ ಯಾವ್ಯಾವ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಜಾತಿ ಸಮೀಕ್ಷಾ ವರದಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.;
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಣಸಿಗುವ , ದನಕರು ಮತ್ತು ವ್ಯವಸಾಯದ ಜತೆ ಗುರುತಿಸಿಕೊಂಡಿರುವ ಹಾಗೂ ಒಕ್ಕಲಿಗರ ಜತಗೆ ಪ್ರವರ್ಗ 3 A ಮೀಸಲಾತಿ ಪಟ್ಟಿಯಲ್ಲಿ ಸೇರಿಕೊಂಡಿರುವ ಹಳ್ಳಿಕಾರ ಸಮೂದಾಯವನ್ನು ಪ್ರವರ್ಗ 1 ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆಗೆ ಚಾಲನೆ ದೊರೆತಿದೆ. ಈ ಬೇಡಿಕೆ ಈಡೇರಬೇಕಾದರೆ, ಅಂತಹ ಅನೇಕ ಜನಾಂಗಗಳ ಜನಸಂಖ್ಯೆ ಮತ್ತಿತರ ಅಂಶಗಳನ್ನು ಹೊಂದಿರುವ ಜಾತಿ ಗಣತಿ ಜಾರಿಗೆ ಬರಬೇಕಾಗಿದೆ.
ರಾಜ್ಯ ಹಳ್ಳಿಕಾರರ ಸಂಘದ ವತಿಯಿಂದ ಬೆಂಗಳೂರಿನ ಕೆಂಗೇರಿ ಸಮೀಪ ಆಯೋಜಿಸಿದ್ದ ಹಳ್ಳಿಕಾರ ಸಮುದಾಯದ ಸಮಾವೇಶವನ್ನು ಭಾನುವಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3A ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಸಮಾಜದಲ್ಲಿ ಯಾವ್ಯಾವ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಜಾತಿ ಸಮೀಕ್ಷಾ ವರದಿಗಳು ಮುಖ್ಯ. 2011 ರಲ್ಲಿ ಜನಗಣತಿಯೇ ಕೊನೆ ಗಣತಿ. ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಈ ಸಮೂದಾಯವನ್ನು ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ. ಪ್ರವರ್ಗ 1 ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ನಂತರ ತೀರ್ಮಾನ ಮಾಡಲಾಗುವುದು. ನನಗೆ ಹಳ್ಳಿಕಾರ ಸಮುದಾಯದ ಬಗ್ಗೆ ಸಹಾನುಭೂತಿ ಇದೆ. ಖಂಡಿತಾ ಸಹಾಯ ಮಾಡ್ತೀನಿ. ಜಾತಿ ತಾರತಮ್ಯದ ವ್ಯವಸ್ಥೆಯಲ್ಲಿ ಶಿಕ್ಷಣ ಇಲ್ಲದಿದ್ದರೆ ಸಮಾಜದ ಮುಖ್ಯವಾಹಿನಿಯಲ್ಲಿ ಸಮರ್ಥವಾಗಿರುವುದು ಕಷ್ಟ ಎಂದರು.
ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿದೆ. ಈ ವ್ಯಾಪ್ತಿಯೊಳಗೆ ಹಳ್ಳಿಕಾರ ಸಮುದಾಯ ಬರುತ್ತದೆಯಾ ಎನ್ನುವುದು ಪರಿಶೀಲಿಸಬೇಕಿದೆ. ಈ ಸಮುದಾಯವನ್ನು ಪ್ರವರ್ಗ 3ಎ ಗೆ ಸೇರಿಸಿರುವುದು ಸರಿಯಲ್ಲ. ಆದ್ದರಿಂದ ಶಾಶ್ವತ ಹಿಂದುಳಿದ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ ಅಧ್ಯಯನ ಮಾಡಿಸಿ ವರದಿ ಪಡೆಯಲಾಗುವುದು. ಆ ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದರು.
ಯಾರೀ ಹಳ್ಳಿಕಾರರು?
ಹಳ್ಳಿಕಾರ ಎಂಬುದು ದುಬಾರಿ ಬೆಲೆಯ ಹೋರಿ ತಳಿಯ ಹೆಸರು. ಆದರೆ, ಗೋ ತಳಿಯ ಸಂಬಂಧ ಇಟ್ಟುಕೊಂಡ ಜನಾಂಗವೇ ಹಳ್ಳಿಕಾರ ಸಮುದಾಯ. ದನಕರುಗಳೊಂದಿಗೆ ಬೆಸೆದುಕೊಂಡಿರುವ ಈ ಜನರಿಗೆ 800 ವರ್ಷಗಳ ಇತಿಹಾಸ ಇದೆ ಎನ್ನಲಾಗಿದೆ.
ಪ್ರವರ್ಗ 3 ಎ ಗೆ ಒಕ್ಕಲಿಗ ಜನಾಂಗದ ಜತೆ ಬೆಸೆದುಕೊಂಡಿರುವ ಈ ಜನಾಂಗ ಯಾದವ ಸಮೂದಾಯದ ಒಂದು ಉಪ ಸಮುದಾಯ ಎಂದು ಹೇಳಲಾಗುತ್ತದೆ. ಇದೆಯಂತೆ. ವಿಚಿತ್ರ ಎಂದರೆ ಹಳ್ಳಿಕಾರ ಎಂಬುದು ಯಾದವ ಕುಲಕ್ಕೆ ಸಂಬಂಧಿಸಿದ ಒಂದು ಜನಾಂಗ. ಆದರೆ, ಈ ಜಾತಿಯ ಹೆಸರು ಥಳಕು ಹಾಕಿಕೊಂಡಿರುವುದು ಒಕ್ಕಲಿಗ ಸಮುದಾಯದ ಜೊತೆಗೆ. ಶ್ರೀಕೃಷ್ಣ ತಮ್ಮ ಜನಾಂಗದ ಮೂಲಪುರುಷ ಎನ್ನುವ ಈ ಸಮುದಾಯದವರು, ಹಿಂದೆ ರಾಜರ ಕಾಲದಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದೂ ಹೇಳಲಾಗುತ್ತದೆ.
ದೆಹಲಿಯ ರಾಜಸೇನೆಯಲ್ಲಿ ಅವರದೇ ಸಮುದಾಯದ ದೊಡ್ಡನಾಯಕ, ಶಲ್ಯತಿಮ್ಮನಾಯಕ ಎಂಬುವರು ಇದ್ದರು ಹಾಗೂ ವರ್ಷಗಳ ಬಳಿಕ ಆ ಜನಾಂಗ ಎಲ್ಲಾ ರಾಜ್ಯಗಳಿಗೆ ಪಸರಿಸಿತು ಎಂಬ ನಂಬಿಕೆ ಇದೆ.
ದನ ಕರುಗಳ ಜತೆ ವ್ಯವಸಾಯದಲ್ಲಿ ಗುರುತಿಸಿಕೊಂಡಿರುವ ಈ ಸಮೂದಾಯ ಸಾಕುವ "ಹಳ್ಳಿಕಾರ" ಹೋರಿಗಳಿಗೆ ದೇಶಾದ್ಯಂತ ಬೇಡಿಕೆ ಇದೆಡ. ಹಿಂದಿನ ಕಾಲದಲ್ಲಿ ಈ ಎತ್ತುಗಳನ್ನು ಸೇನೆಗಳಲ್ಲೂ ಬಳಸುತ್ತಿದ್ದರೆಂಬ ಐತಿಹ್ಯ ಇದೆ.
ಕರ್ನಾಟಕದ ಚಿತ್ರದುರ್ಗ, ಮಂಡ್ಯ, ಹಾಸನ, ಮೈಸೂರು, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಣಸಿಗುವ ಹಳ್ಳಿಕಾರರ ಸಮೂದಾಯದಲ್ಲಿ ದ್ಯಾವನಹಳ್ಳಿಕಾರ, ಗೋಡೆ ಹಳ್ಳಿಕಾರ, ಕೆಂಪನಹಳ್ಳಿಕಾರ ಸೇರಿದಂತೆ ಈ ಹತ್ತಾರು ಉಪ ಪಂಗಡಗಳು ಇವೆ.
ತುಮಕೂರಿನ ಕೊರಟಗೆರೆಯ ಚನ್ನರಾಯನದುರ್ಗದಲ್ಲಿ ಹಳ್ಳಿಕಾರರ ಗುರುಮಠವಿದ್ದು, ಕುಲಗುರು ಗುರುಮುರಹಸ್ವಾಮಿ ಸುಮಾರು 200 ವರ್ಷದ ಹಿಂದೆ ಮಠ ಸ್ಥಾಪಿಸಿದರೆಂಬ ನಂಬಿಕೆ ಆ ಸಮೂದಾಯದಲ್ಲಿದೆ. ಬೆಂಗಳೂರಿನ ರಾಣಾಸಿಂಗ್ ಪೇಟೆಯಲ್ಲೂ ಶಾಖಾ ಮಠ ಇದೆ. 1932ರಲ್ಲಿ ಹಳ್ಳಿಕಾರರ ಸಂಘ ಸ್ಥಾಪನೆಯಾಗಿದ್ದರೂ, 1940ಲ್ಲಿ ಮೈಸೂರು ಮಹಾರಾಜರು ಪ್ರತ್ಯೇಕವಾಗಿ ಜನಗಣತಿ ಮಾಡಿಸಿದ ಬಳಿಕ 1944ರಲ್ಲಿ ಅಧಿಕೃತ ಸಂಘವಾಗಿತ್ತು. ತಮ್ಮ ಜನಾಂಗವನ್ನು ಪ್ರವರ್ಗ 1ರಲ್ಲಿ ಸೇರಿಸಬೇಕೆಂಬುದು ಸಮೂದಾದ ಬಹು ದಿನಗಳ ಬೇಡಿಕೆಯಾಗಿತ್ತು.