Sharavathi to Bangalore | ಶರಾವತಿ ನೀರು ತರುವ ಯೋಜನೆ ಕೈಬಿಡಿ: ಮುಖ್ಯಮಂತ್ರಿಗೆ ಬಹಿರಂಗಪತ್ರ
ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಶರಾವತಿ ನೀರು ತರಲು ಡಿಪಿಆರ್ ತಯಾರಿಗೆ ಮುಂದಾಗುವ ಮೂಲಕ ಶರಾವತಿ ಕೊಳ್ಳದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಸರ್ಕಾರದ ನಡೆಯನ್ನು ಖಂಡಿಸಿ, ರಾಜ್ಯದ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು ʼಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟʼದ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.;
ಬೆಂಗಳೂರು ಮಹಾನಗರದ ನೀರಿನ ದಾಹ ತೀರಿಸಲು ರಾಜ್ಯ ಸರ್ಕಾರ, ದೂರದ ಶರಾವತಿ ನದಿಯ ನೀರನ್ನು ತರಲು ಯೋಜನೆ ರೂಪಿಸಲು ಡಿಪಿಆರ್ ಸಿದ್ಧಪಡಿಸಲು ಗುತ್ತಿಗೆ ನೀಡಿದೆ. ಸರ್ಕಾರದ ಈ ನಡೆಯ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯಲ್ಲಿ ಮತ್ತೊಮ್ಮೆ ಹೋರಾಟದ ತಯಾರಿಗಳು ಗರಿಗೆದರಿವೆ.
2019ರಲ್ಲಿ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೂಡ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ 380 ಕಿ.ಮೀ ದೂರದ ಬೆಂಗಳೂರಿಗೆ ನೀರು ತರುವ ಪ್ರಸ್ತಾಪವಿತ್ತು. ಹಿರಿಯ ಸಾಹಿತಿ, ನಾಡೋಜ ನಾ ಡಿಸೋಜಾ ಅವರ ನೇತೃತ್ವದಲ್ಲಿ ಆ ಬಾರಿ ಕೂಡ ಶರಾವತಿ ಕೊಳ್ಳದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಾಗಿತ್ತು. ಜಿಲ್ಲಾ ಬಂದ್ ಮೂಲಕ ಮಲೆನಾಡಿನ ಜನ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ಕುಸಿದು, ಶಿವಮೊಗ್ಗದವರೇ ಆದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಯೋಜನೆಯನ್ನು ಪ್ರಸ್ತಾಪವನ್ನು ತಳ್ಳಿಹಾಕಿದ್ದರು.
ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಶರಾವತಿ ನೀರು ತರಲು ಡಿಪಿಆರ್ ತಯಾರಿಗೆ ಮುಂದಾಗುವ ಮೂಲಕ ಶರಾವತಿ ಕೊಳ್ಳದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ವಿವಾದದ ಹುತ್ತಕ್ಕೆ ಮತ್ತೆ ಕೈ ಹಾಕಿರುವ ಸರ್ಕಾರದ ನಡೆಯನ್ನು ಖಂಡಿಸಿ, ಇದೀಗ ಮಲೆನಾಡು ಮಾತ್ರವಲ್ಲದೆ ಇಡೀ ರಾಜ್ಯದ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ರೈತ, ದಲಿತ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಹಿರಿಯ ಸಾಹಿತಿ, ನಾಡೋಜ ನಾ ಡಿಸೋಜಾ, ಹಿರಿಯ ಚಿಂತಕರಾದ ಡಾ ಪುರುಷೋತ್ತಮ ಬಿಳಿಮಲೆ, ಡಾ ಬಂಜಗೆರೆ ಜಯಪ್ರಕಾಶ್, ಕುಂ ವೀರಭದ್ರಪ್ಪ, ನಾಗೇಶ್ ಹೆಗಡೆ, ಡಾ ರಾಜೇಂದ್ರ ಚೆನ್ನಿ, ಡಾ ಶ್ರೀಕಂಠ ಕೂಡಿಗೆ, ಶಾರದಾ ಗೋಪಾಲ, ಕೆ ಪಿ ಸುರೇಶ್, ಡಾ ರಹಮತ್ ತರೀಕೆರೆ, ಕೆ ಟಿ ಗಂಗಾಧರ್, ಎಚ್ ಆರ್ ಬಸವರಾಜಪ್ಪ, ಅನುಪಮಾ ಕವಲಕ್ಕಿ ಸೇರಿದಂತೆ 60 ಕ್ಕೂ ಹೆಚ್ಚು ಮಂದಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.
ಶರಾವತಿ ನೀರು ತರುವ ಯೋಜನೆ ಕೈಬಿಡಿ ಎಂದು ಒತ್ತಾಯಿಸಿ ಸಾಹಿತಿ- ಹೋರಾಟಗಾರರು ಬರೆದಿರುವ ಬಹಿರಂಗ ಪತ್ರದ ಪೂರ್ಣಪಾಠ ಇಲ್ಲಿದೆ;
"ಯಾವುದೇ ಮಿತಿ ಇಲ್ಲದೆ, ವೈಜ್ಞಾನಿಕ ಯೋಜನೆ ಇಲ್ಲದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆ ನೀಗಿಸಲು ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ಶರಾವತಿ ನದಿಯ ಮೇಲೆ ಕಣ್ಣು ಹಾಕಿದೆ."
"ಬೆಂಗಳೂರಿನಿಂದ 380 ಕಿಮೀ ದೂರದಲ್ಲಿರುವ, ಜಗತ್ತಿನ ಅತ್ಯಪರೂಪದ ಅತಿ ಸೂಕ್ಷ್ಮ ಜೀವ ವೈವಿಧ್ಯದ ಕಣಿವೆಯಾದ ಶರಾವತಿ ಕೊಳ್ಳದಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮತ್ತೆ ಮುಂದಾಗಿದೆ. ಆದರೆ ಈ ಯೋಜನೆ ಕೇವಲ ಶರಾವತಿ ಕೊಳ್ಳವಷ್ಟೇ ಅಲ್ಲದೆ, ಪಶ್ಷಿಮಘಟ್ಟದ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಲಿದೆ ಎಂದು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೇರಿದಂತೆ ಹಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ."
"ಈ ಹಿಂದೆ, 2019ರಲ್ಲಿ ಕೂಡ ಅಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿತ್ತು. ಆಗ ಶರಾವತಿ ಕೊಳ್ಳದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ಜನ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿದ್ದರು. ತಿಂಗಳುಗಟ್ಟಲೆ ನಡೆದ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ, ಯೋಜನೆ ಕಾರ್ಯಸಾಧುವಲ್ಲ, ಹಾಗಾಗಿ ಆ ಯೋಚನೆ ಕೈಬಿಡಲಾಗಿದೆ ಎಂದು ಘೋಷಿಸಿತ್ತು."
"ಐದು ವರ್ಷಗಳಲ್ಲೇ ಸರ್ಕಾರ ಮತ್ತೊಮ್ಮೆ ಶರಾವತಿ ನದಿ ನೀರಿನ ಮೇಲೆ ಕಣ್ಣು ನೆಟ್ಟಿದೆ."
"ಆದರೆ, ರಾಜ್ಯದ ಅತ್ಯಂತ ಅಪರೂಪದ ಸಿಂಗಳೀಕ(ಲೈಯನ್ ಟೇಲ್ಡ್ ಮಕಾಕಿ-ಎಲ್ ಟಿಎಂ) ಸಂರಕ್ಣಿತ ಅಭ್ಯಯಾರಣ್ಯವನ್ನೂ ಒಳಗೊಂಡಂತೆ ಮಹತ್ವದ ಜೀವ ಸಂಕುಲ, ಸಾವಿರಾರು ಎಕರೆ ಕಾಡು ಮತ್ತು ರೈತಾಪಿ ಜನರ ಜಮೀನು ನಾಶ ಮಾಡಿ, 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಜನರ ತೆರಿಗೆ ಹಣ ಪೋಲು ಮಾಡುವ ಈ ಯೋಜನೆ ಬಗ್ಗೆ ನಮ್ಮ ಸ್ಪಷ್ಟ ವಿರೋಧವಿದೆ. ಏಕೆಂದರೆ, ಜೀವ ನದಿಯನ್ನು ಬತ್ತಿಸಿ ಬೆಂಗಳೂರಿಗೆ ನೀರು ತರುವುದು ವೈಜ್ಞಾನಿಕವಾಗಿ ಮಾತ್ರವಲ್ಲದ, ವಿವೇಚನೆಯ ದೃಷ್ಟಿಯಿಂದಲೂ ಒಪ್ಪುವಂತಹ ಚಿಂತನೆಯಲ್ಲ."
"ಅಲ್ಲದೆ, ಎತ್ತಿನ ಹೊಳೆ ಯೋಜನೆ ಗಮನಿಸಿದರೆ ಇದು ಮೂಲತಃ ಗುತ್ತಿಗೆದಾರರ ಮೂಲಕ ಭ್ರಷ್ಟಾಚಾರದ ಹೊಳೆ ಹರಿಸುವ ಇನ್ನೊಂದು ಯೋಜನೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ."
"ಅದರಲ್ಲೂ ನಮ್ಮದೇ ಅಂಕೋಲದ ಶಿರೂರು, ನೆರೆಯ ಕೇರಳದ ವಯನಾಡಿನಲ್ಲಿ ಆಗಿರುವ ಬೆಚ್ಚಿಬೀಳಿಸುವ ದುರಂತಗಳು ಕಣ್ಣೆದುರೇ ಇರುವಾಗ ಪಶ್ಚಿಮಘಟ್ಟದ ಪ್ರಾಕೃತಿಕ ರಚನೆಯನ್ನೇ ಬುಡಮೇಲು ಮಾಡುವ ಇಂತಹ ಯೋಜನೆಗಳ ಬದಲು ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಸರ್ಕಾರ ಯೋಚಿಸುವುದು ವಿವೇಕ. ಆದ್ದರಿಂದ ಶರಾವತಿ ನೀರು ತರುವ ಯೋಜನೆ ಕೈಬಿಟ್ಟು, ಬೆಂಗಳೂರಿಗೆ ಅಗತ್ಯವಿರುವ 15 ಟಿಎಂಸಿಗಿಂತ ಅಧಿಕ ನೀರು ಸಿಗುವ ಮಹಾನಗರದಲ್ಲಿ ಮಳೆ ನೀರು ಇಂಗಿಸುವ ಮತ್ತು ಕೆರೆಕಟ್ಟೆಗಳ ಪುನರುಜ್ಜೀವನ ಕೈಗೆತ್ತಿಕೊಳ್ಳುವುದು ವಿವೇಚನೆಯ ಮಾರ್ಗ."
"ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶರಾವತಿ ನೀರು ತರುವ ಪರಿಸರ ಘಾತುಕ, ಜೀವ ವಿರೋಧಿ ಯೋಜನೆಯನ್ನು ಕೈಬಿಡಬೇಕು. ಆ ಮೂಲಕ ನಾಡಿನ ಕಾಡು ಮತ್ತು ನಾಡಿನ ಸ್ವಾಸ್ಥ್ಯ ಕಾಯುವ ತನ್ನ ಹೊಣೆಗಾರಿಕೆ ತೋರಬೇಕು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ."
ʼಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟʼದ ಪರವಾಗಿ
ಸಹಿ/
ನಾಡೋಜ ನಾ ಡಿಸೋಜಾ, ಸಾಗರ. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮೂಲೆಗದ್ದೆ, ಹೊಸನಗರ. ಡಾ ಬಂಜಗೆರೆ ಜಯಪ್ರಕಾಶ್, ಬೆಂಗಳೂರು. ಡಾ ಪುರುಷೋತ್ತಮ ಬಿಳಿಮಲೆ, ಬೆಂಗಳೂರು. ಡಾ ರಾಜೇಂದ್ರ ಚೆನ್ನಿ, ಶಿವಮೊಗ್ಗ. ಡಾ ಶ್ರೀಕಂಠ ಕೂಡಿಗೆ, ಶಿವಮೊಗ್ಗ. ಡಾ ರಹಮತ್ ತರೀಕೆರೆ, ಹಂಪಿ. ನಾಗೇಶ್ ಹೆಗಡೆ, ಬೆಂಗಳೂರು. ಕೆ ಟಿ ಗಂಗಾಧರ್, ಶಿವಮೊಗ್ಗ.ಚಿದಂಬರ ರಾವ್ ಜಂಬೆ, ಹೆಗ್ಗೋಡು. ಡಾ ಎಚ್ ಎಸ್ ಅನುಪಮಾ,ಕವಲಕ್ಕಿ. ಕೆ.ಪಿ.ಸುರೇಶ್, ಮೈಸೂರು. ಪ್ರಸಾದ್ ರಕ್ಷಿದಿ, ರಕ್ಷಿದಿ. ಕೇಸರಿ ಹರವೂ, ಬೆಂಗಳೂರು. ಎಚ್ ಆರ್ ಬಸವರಾಜಪ್ಪ, ಶಿವಮೊಗ್ಗ. ಡಾ ರಾಜಪ್ಪ ದಳವಾಯಿ, ಬೆಂಗಳೂರು. ಅಕ್ಷತಾ ಹುಂಚದಕಟ್ಟೆ, ಶಿವಮೊಗ್ಗ. ಎಂ ಗುರುಮೂರ್ತಿ, ಶಿವಮೊಗ್ಗ. ಕೆ ಎಲ್ ಅಶೋಕ್, ಶಿವಮೊಗ್ಗ. ಚಾರ್ವಾಕ ರಾಘವೇಂದ್ರ, ಶಶಿ ಸಂಪಳ್ಳಿ, ಶಿವಮೊಗ್ಗ. ಉಮಾಮಹೇಶ್ವರ ಹೆಗಡೆ, ಹೆಗ್ಗೋಡು. ಹರ್ಷಕುಮಾರ್ ಕುಗ್ವೆ, ಸಾಗರ. ಜಿ ಟಿ ಸತ್ಯನಾರಾಯಣ, ತುಮರಿ. ಅಖಿಲೇಶ್ ಚಿಪ್ಪಳಿ, ಸಾಗರ. ಕೆ ಪಿ ಶ್ರೀಪಾಲ್, ಶಿವಮೊಗ್ಗ. ಜೆ ಆರ್ ಜನಾರ್ಧನ್, ಶಿವಮೊಗ್ಗ. ಅಶೋಕ್ ಕುಮಾರ್, ಶಿವಮೊಗ್ಗ. ಡಿ ಪಿ ಸತೀಶ್, ದೆಹಲಿ. ಅ.ರಾ. ಶ್ರೀನಿವಾಸ್, ಸಾಗರ. ಪಿ ವಿ ಸುಬ್ರಾಯ, ಸಾಗರ. ಮೇಜರ್ ನಾಗರಾಜ್, ಸಾಗರ. ನಾರಾಯಣಮೂರ್ತಿ, ಸಾಗರ. ರವಿಕುಮಾರ್ ಟೆಲೆಕ್ಸ್, ಶಿವಮೊಗ್ಗ. ನಾಗರಾಜ್, ಸಾಗರ. ಚಂದ್ರಶೇಖರ್ ಸಿರಿವಂತೆ, ಸಾಗರ. ಸವಿತಾ, ಸಾಗರ. ರಾಘವೇಂದ್ರ, ತಾಳಗುಪ್ಪ. ಟಿ ವಸಂತ ರಾವ್ ಕುಗ್ವೆ, ಸಾಗರ. ಸದ್ಗುರು ಸಂತೋಷ್, ಸಾಗರ. ನಾ ದಿವಾಕರ ಮೈಸೂರು, ಶಾರದಾ ಗೋಪಾಲ ಧಾರವಾಡ, ಪರಶುರಾಮೇಗೌಡ ಮೈಸೂರು, ಪಾರ್ವತಿ ಶ್ರೀರಾಮ ಬೆಂಗಳೂರು, ಮಹೇಶ್ ದಾವಣಗೆರೆ, ರೇಖಾ ಉತ್ತರ ಕನ್ನಡ, ನಿರ್ಮಲಾ ಹಿರೇಗೌಡರ್ ಧಾರವಾಡ, K. ಗೋಪಿಕಾ ದಕ್ಷಿಣ ಕನ್ನಡ, ಹೊರೆಯಾಲ ದೊರೆಸ್ವಾಮಿ ಮೈಸೂರು, ಪ್ರಸಾದ್ ಕುಮಾರ್ ಉಡುಪಿ, ಸುರೇಂದ್ರ ನಂದನವನ ರಾಮನಗರ, ಡಿ. ಎಸ್ ದೊರೆಸ್ವಾಮಿ ಚಾಮರಾಜನಗರ, ಸೀಮಾ ಸಜ್ಜನ್ ಶಿವಮೊಗ್ಗ, ಸರಸ್ವತಿ ಪೂಜಾರ ಬೆಳಗಾವಿ, ಶಾಂತ ಕೃಷ್ಣ ಮೈಸೂರು, ಡಾ. ಪ್ರತಾಪ್ ಸಿಂಗ್ ತಿವಾರಿ ಕಲಬುರಗಿ, ಆಂಜನೇಯರೆಡ್ಡಿ ಚಿಕ್ಕಬಳ್ಳಾಪುರ, ಹು. ಕಾ. ಗೌಡಯ್ಯ, ಜಬಿವುಲ್ಲಾ ಟಿ, ವಿಶ್ವನಾಥ್, ಶ್ರೀಕುಮಾರ್ ಉಡುಪಿ, ಎಮ್ ಎಸ್ ಸುಬ್ರಮಣ್ಯ ಸ್ವಾಮಿ, ವಿಶಾಲಾಕ್ಷಿ ಬೆಂಗಳೂರು, ವಿಶ್ವನಾಥ ಗೌಡ ಬಿರೂರು, ಮಮತಾ ರೈ ಉಡುಪಿ.