ಬಾಗಲಕೋಟೆ ಕಾಂಗ್ರೆಸ್ ಶಾಸಕ ಹೆಚ್.ವೈ.ಮೇಟಿ ವಿಧಿವಶ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಚ್.ವೈ.ಮೇಟಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹೆಚ್.ವೈ. ಮೇಟಿ
ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಹಿರಿಯ ಶಾಸಕ ಹೆಚ್.ವೈ.ಮೇಟಿ (79) ಮಂಗಳವಾರ ವಿಧಿವಶರಾಗಿದ್ದಾರೆ.
ಇವರು ಬಾಗಲಕೋಟೆ ಕಾಂಗ್ರೆಸ್ ಶಾಸಕರಾಗಿದ್ದು, ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬಾಗಲಕೋಟೆಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಚ್.ವೈ.ಮೇಟಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
ಹೆಚ್.ವೈ. ಮೇಟಿ ಅವರ ರಾಜಕೀಯ ಹಿನ್ನೆಲೆ
ಬಾಗಲಕೋಟೆ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹೆಚ್.ವೈ. ಮೇಟಿ, ಉತ್ತರ ಕರ್ನಾಟಕದ ಪ್ರಭಾವಿ ಕುರುಬ ಸಮುದಾಯದ ನಾಯಕರಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಪಯಣ ಆರಂಭಿಸಿದರು. ನಂತರ, ಇದೇ ಕ್ಷೇತ್ರದಿಂದ 1999 ಮತ್ತು 2004ರಲ್ಲೂ ಶಾಸಕರಾಗಿ ಆಯ್ಕೆಯಾಗಿದ್ದರು.
2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಅವರ ವಿರುದ್ಧ ಸೋತಿದ್ದರೂ, 2023ರ ಚುನಾವಣೆಯಲ್ಲಿ ಮತ್ತೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇತ್ತೀಚೆಗೆ ಅವರನ್ನು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಹೆಚ್.ವೈ.ಮೇಟಿ ಅವರು ಜಿಲ್ಲೆಯ ತಿಮ್ಮಾಪುರದಲ್ಲಿ 1946ರ ಅಕ್ಟೋಬರ್ 9ರಂದು ಜನಿಸಿದ್ದರು. ಅವರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ನಂತರ 1994ರಲ್ಲಿ ಗುಳೇದಗುಡ್ಡದಲ್ಲಿ ಜೆಡಿಎಸ್‌ನಿಂದ ಎರಡನೇ ಬಾರಿ ಗೆಲುವು ಸಾಧಿಸಿ, ಹೆಚ್.ಡಿ.ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ 1996ರಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು. 2004ರಲ್ಲಿ ಮತ್ತೆ ಗುಳೇದಗುಡ್ಡ ಕ್ಷೇತ್ರದಿಂದ ಗೆಲುವು ಕಂಡಿದ್ದರು.
2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಇವರು, ಅದೇ ವರ್ಷ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ನಂತರ 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಮೇಟಿ ಅವರು, ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಹೆಚ್.ವೈ.ಮೇಟಿ ಅವರು, 2023ರಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ವಿವಾದಗಳಿಂದಲೂ ಸುದ್ದಿಯಾಗಿದ್ದ ನಾಯಕ
ಮೇಟಿ ಅವರ ರಾಜಕೀಯ ಜೀವನವು ವಿವಾದಗಳಿಂದಲೂ ಕೂಡಿತ್ತು. 2016ರಲ್ಲಿ ಅವರು ಅಬಕಾರಿ ಸಚಿವರಾಗಿದ್ದಾಗ, ಲೈಂಗಿಕ ಹಗರಣವೊಂದರ ಸಿಡಿ ಬಹಿರಂಗಗೊಂಡು, ಅದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಈ ವಿವಾದದ ಹಿನ್ನೆಲೆಯಲ್ಲಿ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದಾಗ್ಯೂ, ನಂತರ ಈ ಪ್ರಕರಣದ ತನಿಖೆ ನಡೆಸಿದ ಸಿಐಡಿ, ಅವರಿಗೆ 'ಕ್ಲೀನ್ ಚಿಟ್' ನೀಡಿತ್ತು. ವಿಡಿಯೋವನ್ನು ತಿರುಚಲಾಗಿದೆ ಎಂದು ವರದಿ ನೀಡಿತ್ತಾದರೂ, ಈ ಹಗರಣವು ಅವರ ರಾಜಕೀಯ ವೃತ್ತಿಜೀವನದ ಮೇಲೆ ಕಪ್ಪು ಚುಕ್ಕೆಯಾಗಿ ಉಳಿದಿತ್ತು.
ಮೇಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ಬಿಜೆಪಿ ನಾಯಕರು ಹಾಗೂ ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಚ್.ವೈ. ಮೇಟಿ ಅಕಾಲಿಕ ನಿಧನದಿಂದ ಈಗ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ತೆರವಾಗಿದೆ. ಮುಂದಿನ 6 ತಿಂಗಳೊಳಗೆ ಕೇಂದ್ರ ಚುನಾವಣಾ ಆಯೋಗ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಲಿದೆ.