ದಾಖಲೆ ಕೊಟ್ರೆ ಡೊನೇಷನ್ ಪಡೆವವರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಫೀಸ್ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ;
“ಖಾಸಗಿ ಶಾಲೆಗಳಿಗೆ ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಫೀಸ್ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಶಾಲೆಗಳು ಸಹಾಯ ಮಾಡಬೇಕು. ಅಕ್ರಮವಾಗಿ ಫೀಸ್ ತೆಗೆದುಕೊಂಡರೆ, ಹೆಚ್ಚಿನ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಡೊನೇಷನ್ ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ತೆಗೆದುಕೊಂಡಿದ್ದು ಗಮನಕ್ಕೆ ಬಂದರೆ ಅಥವಾ ದಾಖಲೆ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲಿಲ್ಲ. ಅದಕ್ಕೆ ಕ್ಯಾಂಪ್ಸ್(ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ) ಇರುತ್ತದೆ. ಅಲ್ಲಿ ತೆಗೆದುಕೊಂಡ ತೀರ್ಮಾನದಂತೆ ಶುಲ್ಕ ಪಡೆಯಲು ಅವಕಾಶವಿದೆ. ಅದರಲ್ಲಿ ಶಿಕ್ಷಣ ಇಲಾಖೆ ಮೂಗು ತೂರಿಸಲು ಸಾಧ್ಯವಿಲ್ಲ. ಆದರೆ ಶುಲ್ಕ ಸಂಗ್ರಹ ನೆಪದಲ್ಲಿ ಡೊನೇಷನ್ ಪಡೆಯುವುದು ತಪ್ಪು ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಡೆಯುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಆದರೆ ದಾಖಲೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಡೊನೇಷನ್ ಕೇಳುವುದು ತಪ್ಪು. ಕೊಡುವುದು ಕೂಡ ತಪ್ಪು. ಡೊನೇಷನ್ ಪಡೆದಿರುವ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಂಕಿತಾಗೆ ವೈಯಕ್ತಿಕ ಸಹಾಯ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೇ ಮೊದಲ ರ‍್ಯಾಂಕ್ ಬಂದ ಬಾಗಲಕೋಟೆ ಜಿಲ್ಲೆಯ ಅಂಕಿತಾ ಕೊನ್ನೂರ್‌ಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಮಧು ಬಂಗಾರಪ್ಪ ಘೋಷಿಸಿದರು. “ಏನಾದರೂ ಸಹಾಯ ಬೇಕು ಎಂದರೆ ಕೇಳು ಎಂಬುದಾಗಿ ಅಂಕಿತಾಗೆ ಹೇಳಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಆಕೆಗೆ ಸಿಗುತ್ತವೆ. ಉನ್ನತ ಶಿಕ್ಷಣಕ್ಕೆ ಬೇಕಾದರೆ ಆಕೆಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ” ಎಂಬುದಾಗಿ ಮಧು ಬಂಗಾರಪ್ಪ ಹೇಳಿದರು.
ಇನ್ನು, ಶಿವಮೊಗ್ಗ ಫಲಿತಾಂಶದಲ್ಲಿ 28ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಬಂದಿದೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಶಿವಮೊಗ್ಗ ಉತ್ತಮ ಫಲಿತಾಂಶ ಬಂದಿದೆ. ಶಿವಮೊಗ್ಗ 3ನೇ ಸ್ಥಾನಕ್ಕೆ ಬಂದಿರುವುದು ತುಂಬಾ ಸಂತೋಷ ಆಗಿದೆ ಎಂದರು.