ವಿವಾದಿತ ಹೇಳಿಕೆ | ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ

ಹೈಕೋರ್ಟ್‌ ನ್ಯಾಯಾಧೀಶರಾದ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಮಹಿಳಾ ವಕೀಲರ ಬಗ್ಗೆ ಮಾಡಿರುವ ಸ್ತ್ರೀದ್ವೇಷಿ ವ್ಯಾಖ್ಯಾನದ ವಿಡಿಯೋ ವೈರಲ್ ಆಗಿದೆ;

Update: 2024-09-20 07:44 GMT

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಮತ್ತು ಮಹಿಳಾ ವಕೀಲರ ವಿರುದ್ಧ ಮಾಡಿದ ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.

ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ಭೂಮಾಲೀಕ-ಬಾಡಿಗೆದಾರರ ವಿವಾದ ಕುರಿತ ವಿಚಾರಣೆ ವೇಳೆ ಬೆಂಗಳೂರಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು ʻಪಾಕಿಸ್ತಾನʼ ಎಂದು ಉಲ್ಲೇಖಿಸಿದ್ದಾರೆ ಮತ್ತು ಮಹಿಳಾ ವಕೀಲರ ಬಗ್ಗೆ ಸ್ತ್ರೀದ್ವೇಷದ ಹೇಳಿಕೆ ನೀಡಿದ್ದರು. ನ್ಯಾಯಾಧೀಶರ ಹೇಳಿಕೆಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಆ ಕುರಿತು ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸೇರಿದಂತೆ ಹಿರಿಯ ನ್ಯಾಯಮೂರ್ತಿಗಳಿರುವ ಐವರು ನ್ಯಾಯಮೂರ್ತಿಗಳ ಪೀಠ, ನ್ಯಾ.ವೇದವ್ಯಾಸಾಚಾರ್ ಶ್ರೀಶಾನಂದ ಅವರ ಹೇಳಿಕೆಗಳ ಕುರಿತು ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿತು. ನ್ಯಾಯಾಧೀಶರ ಅಭಿಪ್ರಾಯ ಕುರಿತು ಪೀಠವು ಹೈಕೋರ್ಟ್‌ನಿಂದ ವರದಿ ಕೇಳಿದೆ.

ʻವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅವರ ವ್ಯಾಖ್ಯಾನ ಕುರಿತು ಮಾಧ್ಯಮ ವರದಿಗಳ ಬಗ್ಗೆ ಗಮನ ಸೆಳೆಯಲಾಗಿದೆ. ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಂದ ಸೂಚನೆ ಪಡೆದು, ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ವಿನಂತಿಸಿದ್ದೇವೆ,ʼ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ʻನಾವು ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ರೂಪಿಸಬಹುದು,ʼ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠ ಹೇಳಿದೆ.

ʻಮುಂದಿನ ಎರಡು ದಿನಗಳಲ್ಲಿ ವರದಿ ಪಡೆದು, ಅದನ್ನು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗುವುದು,ʼ ಎಂದು ಸಿಜೆಐ ಹೇಳಿದ್ದಾರೆ. ಅರ್ಜಿಯನ್ನು ಬುಧವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ನ್ಯಾಯಾಧೀಶರು ಗುರುವಾರ (ಸೆ.19) ಮಹಿಳಾ ವಕೀಲರಿಗೆ ವಾಗ್ದಂಡನೆ ಮಾಡಿರುವುದಲ್ಲದೆ, ಕೆಲವು ಆಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು. ಆ ಬಗ್ಗೆ ಸುಪ್ರೀಂಕೋರ್ಟ್‌ ಗಮನ ಸೆಳೆದಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕು ಎಂದು ತಮ್ಮ ʼಎಕ್ಸ್‌ʼ ಖಾತೆಯ ಪೋಸ್ಟ್‌ ಮೂಲಕ ಸಿಜೆಐ ಅವರನ್ನು ಒತ್ತಾಯಿಸಿದ್ದರು.

Tags:    

Similar News