ವೇತನ ವಿಳಂಬ ಸಹಿಸುವುದಿಲ್ಲ: ಜಿಬಿಎ ಅಧಿಕಾರಿಗಳಿಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಎಚ್ಚರಿಕೆ
ಗೋವಿಂದರಾಜನಗರದಲ್ಲಿ ಬೆಂಗಳೂರು ಪಶ್ಚಿಮ ನಿಗಮದ ಪೌರಕಾರ್ಮಿಕರು, ಲೋಡರ್‌ಗಳು, ಕ್ಲೀನರ್‌ಗಳು ಮತ್ತು ಚಾಲಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಘು ಅವರು ಮಾತನಾಡಿದರು.
ಸಾಂದರ್ಭಿಕ ಚಿತ್ರ
ಪೌರಕಾರ್ಮಿಕರು, ಕಸದ ಆಟೋ ಚಾಲಕರು ಮತ್ತು ಸಹಾಯಕರಿಗೆ ವೇತನ ನೀಡುವಲ್ಲಿ ವಿಳಂಬ ಮಾಡಿ ಕಿರುಕುಳ ನೀಡುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಅವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಗೋವಿಂದರಾಜನಗರದಲ್ಲಿ ಬೆಂಗಳೂರು ಪಶ್ಚಿಮ ನಿಗಮದ ಪೌರಕಾರ್ಮಿಕರು, ಲೋಡರ್‌ಗಳು, ಕ್ಲೀನರ್‌ಗಳು ಮತ್ತು ಚಾಲಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಘು ಅವರು ಮಾತನಾಡಿದರು. ನೈರ್ಮಲ್ಯ ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ಲೋಪಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂವಾದದ ವೇಳೆ ಪೌರಕಾರ್ಮಿಕ ಅಂಜಿನಮ್ಮ ಅವರು ತಮ್ಮ ನೇಮಕಾತಿ ಆದೇಶಗಳಲ್ಲಿ ಹುಟ್ಟಿದ ದಿನಾಂಕ, ಸ್ಥಳದಂತಹ ತಾಂತ್ರಿಕ ದೋಷಗಳಿವೆ ಎಂದು ಆಯೋಗದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ನಿಗಮ ಆಯುಕ್ತ ಕೆ.ವಿ. ರಾಜೇಂದ್ರ ಅವರು, ಈ ದೋಷಗಳನ್ನು ಸರಿಪಡಿಸಲು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಶೀಘ್ರವೇ ವಿಶೇಷ ಶಿಬಿರ ಆಯೋಜಿಸುವ ಭರವಸೆ ನೀಡಿದರು.
ಇದಲ್ಲದೆ, ಕಸವನ್ನು ವಿಂಗಡಿಸಲು ನಿರಾಕರಿಸಿದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಆಯುಕ್ತ ರಾಜೇಂದ್ರ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ಅಂತಹ ಘಟನೆಗಳು ನಿಲ್ಲಬೇಕು ಎಂದು ಮೇಲ್ವಿಚಾರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಮೇಲೆ ಸಾರ್ವಜನಿಕರಿಂದ ದೈಹಿಕ ಹಲ್ಲೆ ಮತ್ತು ಮೌಖಿಕ ನಿಂದನೆಯ ಪ್ರಕರಣಗಳು ವರದಿಯಾಗುತ್ತಿರುವುದನ್ನು ಪಿ. ರಘು ಅವರು ಗಮನಕ್ಕೆ ತಂದರು. ಇಂತಹ ಪ್ರಕರಣಗಳಲ್ಲಿ ಕಾರ್ಮಿಕರಿಗೆ ಸಕಾಲದಲ್ಲಿ ಸಹಾಯ ಒದಗಿಸುವಂತೆ ಮತ್ತು ಸೂಕ್ತ ರಕ್ಷಣೆ ಖಚಿತಪಡಿಸುವಂತೆ ಅವರು ಹಿರಿಯ ಅಧಿಕಾರಿಗಳಿಗೆ ಕರೆ ನೀಡಿದರು.