ನೀರಿನ ಖಾಲಿ ಬಾಟಲಿ ಮರುಖರೀದಿಗೆ ನಿಯಮ; ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಚಿಂತನೆ ನಡೆಸಿದೆ.;

Update: 2025-03-22 07:50 GMT

ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. 

ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಚಿಂತನೆ ನಡೆಸಿದೆ. ಈ ಸಂಬಂಧ ನಿಯಮ ರೂಪಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಬಾಟಲಿ ಮೂಲಕ ಕುಡಿಯುವ ನೀರು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜವಾಬ್ದಾರಿ ನಿಗದಿ ಮಾಡಬೇಕು. ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ನೀರಿನ ಬಾಟಲಿ ಖರೀದಿಸುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ ಅಥವಾ ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆಯೂ ನಿಯಮ ರೂಪಿಸಲಾಗುವುದು. ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ವಿವರಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಬಳಕೆ ವಿಪರೀತವಾಗಿದೆ. ಪಾಸ್ಟಿಕ್‌ ಬಳಕೆ ನಿಷೇಧದ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿರುವುದನ್ನು ಮನಗಂಡು ಹೊಸ ನಿಯಮ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

Tags:    

Similar News