ರಾಹುಲ್ ಅಂಗಳಕ್ಕೆ ರಾಜ್ಯ ಕಾಂಗ್ರೆಸ್ 'ಕುರ್ಚಿ' ಕಾದಾಟ; ಖರ್ಗೆ ವರದಿಯಲ್ಲಿದೆ 'ಕೈ' ನಾಯಕರ ಭವಿಷ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸುದೀರ್ಘ ಸಮಾಲೋಚನೆ ನಡೆಸಿದ ಖರ್ಗೆ, ಉಭಯ ನಾಯಕರ ವಾದಗಳನ್ನು ಆಲಿಸಿದ್ದಾರೆ.

Update: 2025-11-24 05:02 GMT

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Click the Play button to listen to article

ಕರ್ನಾಟಕ ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿರುವ ಮುಖ್ಯಮಂತ್ರಿ ಕುರ್ಚಿ ಕಾದಾಟ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಚೆಂಡು ಇದೀಗ ಹೈಕಮಾಂಡ್ ಅಂಗಳ ತಲುಪಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟು ರಾಜ್ಯ ನಾಯಕರ ಅಭಿಪ್ರಾಯ ಆಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈ ಬಗ್ಗೆ ಸಂಪೂರ್ಣ ವರದಿಯನ್ನು ರಾಹುಲ್ ಗಾಂಧಿ ಅವರಿಗೆ ಸಲ್ಲಿಸಲು ಸಜ್ಜಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಾಲು ಸಾಲು ಸಭೆಗಳನ್ನು ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸುದೀರ್ಘ ಸಮಾಲೋಚನೆ ನಡೆಸಿದ ಖರ್ಗೆ, ಉಭಯ ನಾಯಕರ ವಾದಗಳನ್ನು ಆಲಿಸಿದ್ದಾರೆ. ಇದೇ ವೇಳೆ ಹಲವು ಸಚಿವರು ಹಾಗೂ ಶಾಸಕರು ಕೂಡ ಖರ್ಗೆಯವರನ್ನು ಭೇಟಿಯಾಗಿ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ಸಿದ್ದರಾಮಯ್ಯ ವಾದವೇನು?

ಖರ್ಗೆಯವರೊಂದಿಗಿನ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಅವರು ಆಡಳಿತಾತ್ಮಕ ವಿಚಾರಗಳತ್ತ ಗಮನ ಸೆಳೆದಿದ್ದಾರೆ ಎಂದು ತಿಳಿದುಬಂದಿದೆ. "ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆಗಳಿಂದ ಅನಗತ್ಯ ಗೊಂದಲ ಉಂಟಾಗುತ್ತಿದೆ, ಮೊದಲು ಇದಕ್ಕೆ ಬ್ರೇಕ್ ಹಾಕಬೇಕು. ಆಡಳಿತ ಯಂತ್ರ ಚುರುಕುಗೊಳಿಸಲು ಸಂಪುಟ ಪುನಾರಚನೆಗೆ ಅವಕಾಶ ಮಾಡಿಕೊಡಿ," ಎಂದು ಸಿದ್ದರಾಮಯ್ಯ ಅವರು ಖರ್ಗೆ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

'ಕೊಟ್ಟ ಮಾತು ಉಳಿಸಿಕೊಳ್ಳಿ': ಡಿಕೆಶಿ ಪಟ್ಟು

ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನೀಡಿದ್ದ ಭರವಸೆಯನ್ನು ನೆನಪಿಸಿದ್ದಾರೆ. "ಸರ್ಕಾರ ರಚನೆ ವೇಳೆ ನನಗೆ ನೀಡಲಾಗಿದ್ದ 'ಎರಡೂವರೆ ವರ್ಷದ ಅಧಿಕಾರ ಹಂಚಿಕೆ' ಒಪ್ಪಂದದ ಬಗ್ಗೆ ಸ್ಪಷ್ಟತೆ ಕೊಡಿ. ಕೊಟ್ಟ ಮಾತಿನಂತೆ ಈಗ ನನಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸೂಚಿಸಿ," ಎಂದು ಡಿಕೆಶಿ ಅವರು ಖರ್ಗೆಯವರ ಬಳಿ ನೇರವಾಗಿಯೇ ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಮೇಶ್ವರ್ ಎಂಟ್ರಿ: 'ದಲಿತ ಸಿಎಂ' ಕೂಗು

ಈ ಬೆಳವಣಿಗೆಗಳ ನಡುವೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ನಡೆ ಕೂಡ ಮಹತ್ವ ಪಡೆದುಕೊಂಡಿದೆ. ಖರ್ಗೆಯವರನ್ನು ಭೇಟಿಯಾದ ಅವರು, "ಒಂದು ವೇಳೆ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದೇ ಆದರೆ, ಈ ಬಾರಿ ದಲಿತರಿಗೆ ಅವಕಾಶ ನೀಡಬೇಕು. ಆ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು," ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಇದು ನಾಯಕತ್ವದ ಕಗ್ಗಂಟನ್ನು ಮತ್ತಷ್ಟು ಬಿಗಿಯಾಗಿಸಿದೆ.

ನಾಳೆ ರಾಹುಲ್ ಭೇಟಿ: ಅಂತಿಮ ತೀರ್ಮಾನ?

ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ನಾಳೆ (ಮಂಗಳವಾರ) ದೆಹಲಿಗೆ ಆಗಮಿಸಲಿದ್ದಾರೆ. ಅವರು ಬಂದ ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಸಮಗ್ರ ವರದಿಯನ್ನು ಅವರಿಗೆ ಸಲ್ಲಿಸಲಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಹಾಗೂ ಪರಮೇಶ್ವರ್ ಅವರ ಅಭಿಪ್ರಾಯಗಳು ಮತ್ತು ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನೊಳಗೊಂಡ ಖರ್ಗೆ ವರದಿಯನ್ನು ಆಧರಿಸಿ, ರಾಹುಲ್ ಗಾಂಧಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. ಸಂಪುಟ ಪುನಾರಚನೆಯೋ? ಅಥವಾ ನಾಯಕತ್ವ ಬದಲಾವಣೆಯೋ? ಎಂಬ ಗೊಂದಲಗಳಿಗೆ ರಾಹುಲ್ ಗಾಂಧಿ ನೀಡುವ ಸ್ಪಷ್ಟನೆಯೇ ಅಂತಿಮವಾಗಲಿದೆ. ಹೀಗಾಗಿ ರಾಜ್ಯ ನಾಯಕರ ಚಿತ್ತ ಇದೀಗ ದೆಹಲಿಯತ್ತ ನೆಟ್ಟಿದೆ.

Tags:    

Similar News