ಸಂಪುಟ ಪುನಾರಚನೆ; ಐದು ತಿಂಗಳ ಹಿಂದೆಯೇ ಗ್ರೀನ್‌ ಸಿಗ್ನಲ್‌- ಸಿಎಂ

ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Update: 2025-11-24 08:19 GMT

ಸಿಎಂ ಸಿದ್ದರಾಮಯ್ಯ

Click the Play button to listen to article

ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಗಳ ಬೆನ್ನಲ್ಲೇ ಸಂಪುಟ ಪುನಾರಚನೆ ಮಾತುಗಳು ವ್ಯಾಪಕವಾಗಿವೆ. ಸೋಮವಾರ ಸಿಎಂ ಸಿದ್ದರಾಮಯ್ಯ ಅವರು (ನ.24) ಶಿಡ್ಲಘಟ್ಟದಲ್ಲಿ ನೀಡಿದ ಹೇಳಿಕೆ ಬಳಿಕ ಸಂಪುಟ ಪುನಾರಚನೆ ಕುತೂಹಲ ಮೂಡಿಸಿದೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ತಿಂಗಳ ಹಿಂದೆ ಹೈಕಮಾಂಡ್ ನಾಯಕರು ಸಚಿವ ಸಂಪುಟ ಪುನರಾಚನೆಗೆ ಸೂಚನೆ ನೀಡಿದ್ದರು. ನಾನು ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇವೆ ಎಂದು ಹೇಳಿದ್ದಾರೆ. 

ವರಿಷ್ಠರ ತೀರ್ಮಾನಕ್ಕೆ ಬದ್ಧ 

ಅಧಿಕಾರ ಹಂಚಿಕೆ ಕುರಿತು ಹಲವು ಊಹಾಪೋಹಗಳು ಕೇಳಿ ಬರುತ್ತಿವೆ. ನಮ್ಮಲ್ಲಿ ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಾನು ಹಾಗೂ ಡಿ. ಕೆ.ಶಿವಕುಮಾರ್ ನಡೆದುಕೊಳ್ಳಬೇಕು. ಹೈಕಮಾಂಡ್‌ ಸೂಚನೆಯನ್ನು ಪಕ್ಷದ ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.

ನುಡಿದಂತೆ ನಡೆದಿದ್ದೇವೆ

ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ, ನಡೆಯುತ್ತಿದ್ದೇವೆ ಹಾಗೂ ಮುಂದೆಯೂ ನಡೆಯುತ್ತೇವೆ ಎಂದಿದ್ದಾರೆ.

ಬಿಜೆಪಿಯಿಂದ ಅಪಪ್ರಚಾರ

ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಹೇಳಲು ಬರುವುದಿಲ್ಲ. ಸುಳ್ಳೇ ಬಿಜೆಪಿಯವರ ಮನೆ ದೇವರು. ಸರ್ಕಾರದ ಬಳಿ ಹಣವಿಲ್ಲದಿದ್ದರೆ 2,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Tags:    

Similar News