ಬೆಳೆ ಹಾನಿ ಪರಿಹಾರ, ಎರಡನೇ ಬೆಳೆಗೆ ನೀರು ಹರಿಸಲು ಆಗ್ರಹಿಸಿ ನ.27 ರಂದು ಬಿಜೆಪಿ ಹೋರಾಟ
ರಾಜ್ಯ ಕಾಂಗ್ರೆಸ್ ನಾಯಕರು ಡಿನ್ನರ್, ಬ್ರೇಕ್ ಪಾಸ್ಟ್ ಸಭೆ, ದೆಹಲಿ ಯಾತ್ರೆ ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಸಮಾಜವಾದಿ ಅಲ್ಲ, ಮಜಾವಾದಿಯಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಪೋಸ್ಟರ್ ಪ್ರದರ್ಶಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಯಮಕಿಂಕರನಂತಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R. Ashoka), ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನವೆಂಬರ್ 27 ಮತ್ತು 28ರಂದು ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಸೋಮವಾರ (ನ.24) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹರಿಹಾಯ್ದರು. ಇದೇ ವೇಳೆ 'ಅನ್ನದಾತರಿಗೆ ಕೈಕೊಟ್ಟ ಸರ್ಕಾರ' ಎಂಬ ಶೀರ್ಷಿಕೆಯಡಿ ರೈತ ಪರ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಿದರು.
ತುಂಗಭದ್ರಾ ನೀರು ಆಂಧ್ರ ಪಾಲು
"ಸರ್ಕಾರದ ನಿರ್ಲಕ್ಷ್ಯದಿಂದ ತುಂಗಭದ್ರಾ ಜಲಾಶಯದ ಗೇಟ್‌ಗಳು ದುರಸ್ತಿಯಾಗಿಲ್ಲ. ಪರಿಣಾಮವಾಗಿ ನಮ್ಮ ರಾಜ್ಯದ ನೀರು ನೆರೆಯ ಆಂಧ್ರಪ್ರದೇಶದ ಪಾಲಾಗಿದೆ. ಇತ್ತ ನಮ್ಮ ರೈತರಿಗೆ ಎರಡನೇ ಬೆಳೆಗೆ ನೀರು ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ನೀರಾವರಿ ಸಚಿವರು ಅಧಿಕಾರದ ಲಾಲಸೆಯಲ್ಲಿ ಬ್ಯುಸಿಯಾಗಿದ್ದಾರೆ," ಎಂದು ಅಶೋಕ್ ಕಿಡಿಕಾರಿದರು.
ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಮುಳುಗಿದೆ
"ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಕಿತ್ತಾಟ ನಡೆಯುತ್ತಿದೆ. ಕುರ್ಚಿಯ ನಾಲ್ಕು ಕಾಲುಗಳನ್ನು ಕಿತ್ತುಕೊಂಡು ಕೆಲವರು ಹೋಗಿದ್ದಾರೆ. ಡಿನ್ನರ್, ಬ್ರೇಕ್‌ಫಾಸ್ಟ್ ಸಭೆಗಳು ಮತ್ತು ದೆಹಲಿ ಯಾತ್ರೆಗಳಲ್ಲೇ ನಾಯಕರು ಕಾಲ ಕಳೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿಯಲ್ಲ, 'ಮಜಾವಾದಿ'," ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಶಾಸಕರ ಸೇರ್ಪಡೆ ಇಲ್ಲ
"ಕಾಂಗ್ರೆಸ್‌ನಲ್ಲಿ ಶಾಸಕರ ಕುದುರೆ ವ್ಯಾಪಾರ ಜೋರಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಇದರಲ್ಲಿ ಮಗ್ನರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹೆಸರಿಗಷ್ಟೇ ಎಐಸಿಸಿ ಅಧ್ಯಕ್ಷರು, ಅವರ ಕುರ್ಚಿಗೆ ಪವರ್ ಇಲ್ಲ. ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿಗೆ ಬರುವುದಾದರೆ ನಾವು ಸೇರಿಸಿಕೊಳ್ಳುವುದಿಲ್ಲ, ನೇರವಾಗಿ ಚುನಾವಣೆಗೆ ಹೋಗುತ್ತೇವೆ," ಎಂದು ಸ್ಪಷ್ಟಪಡಿಸಿದರು.
"ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದೆ. ಬಿಹಾರದ ಫಲಿತಾಂಶದಂತೆಯೇ ಕರ್ನಾಟಕದಲ್ಲೂ ಫಲಿತಾಂಶ ಬರಲಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 170 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ," ಎಂದು ಆರ್. ಅಶೋಕ್ ಭವಿಷ್ಯ ನುಡಿದರು.