ಸ್ನೇಹಿತೆಯ ರೂಮ್‌ನಲ್ಲಿ ಯುವತಿಯ ಭೀಕರ ಹತ್ಯೆ; ಪ್ರಿಯಕರನಿಗಾಗಿ ಶೋಧ
ಮೃತಳನ್ನು ಆಂಧ್ರಪ್ರದೇಶ ಮೂಲದ 21 ವರ್ಷದ ವಿದ್ಯಾರ್ಥಿನಿ ದೇವಿಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಆರೋಪಿ ಪ್ರೇಮ್‌ವರ್ಧನ್ ತಲೆಮರೆಸಿಕೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಕೊಲೆ ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತೆಯ ರೂಮ್‌ಗೆ ಕರೆದೊಯ್ದು ಯುವತಿಯನ್ನು ಭೀಕರವಾಗಿ ಕೊಲೆಗೈದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವರದಿಯಾಗಿದೆ.
ಮೃತಳನ್ನು ಆಂಧ್ರಪ್ರದೇಶ ಮೂಲದ 21 ವರ್ಷದ ವಿದ್ಯಾರ್ಥಿನಿ ದೇವಿಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಆರೋಪಿ ಪ್ರೇಮ್‌ವರ್ಧನ್ ತಲೆಮರೆಸಿಕೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಘಟನೆಯ ವಿವರ
ಮೂಲತಃ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಗಳಾದ ರೆಡ್ಡಪ್ಪ ಮತ್ತು ಜಗದಂಬಾ ದಂಪತಿಯ ಕೊನೆಯ ಮಗಳು ದೇವಿಶ್ರೀ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ (BBM) ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಆಕೆ ಪ್ರೇಮ್‌ವರ್ಧನ್ ಎಂಬ ಯುವಕನೊಂದಿಗೆ ತಮ್ಮೇನಹಳ್ಳಿಯಲ್ಲಿರುವ ತನ್ನ ಸ್ನೇಹಿತೆಯ ರೂಮ್‌ಗೆ ಹೋಗಿದ್ದಳು. ಅಲ್ಲಿ ಆಕೆಯನ್ನು ಹತ್ಯೆ ಮಾಡಿದ ಆರೋಪಿ, ನಂತರ ಒಬ್ಬನೇ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಭಾನುವಾರ ಕೊಲೆ ನಡೆದಿದ್ದರೂ, ಸೋಮವಾರ ಬೆಳಿಗ್ಗೆವವರೆಗೂ ವಿಷಯ ಯಾರಿಗೂ ತಿಳಿದಿರಲಿಲ್ಲ. ಸೋಮವಾರ ಬೆಳಿಗ್ಗೆ ಸ್ನೇಹಿತೆ ರೂಮ್‌ಗೆ ಬಂದಾಗ ದೇವಿಶ್ರೀ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮ್‌ವರ್ಧನ್ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಆದರೆ ಕೊಲೆಗೆ ನಿಖರವಾದ ಕಾರಣವೇನು ಎಂಬುದು ಆರೋಪಿ ಸಿಕ್ಕ ಮೇಲಷ್ಟೇ ತಿಳಿಯಬೇಕಿದೆ. ಮಗಳ ಉಜ್ವಲ ಭವಿಷ್ಯದ ಕನಸು ಕಂಡು ಬೆಂಗಳೂರಿಗೆ ಕಳುಹಿಸಿದ್ದ ಪೋಷಕರು, ಈಗ ಮಗಳ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.