ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಇಲ್ಲ; ಅನುಮತಿ ನಿರಾಕರಿಸಿದ ರಾಜ್ಯ ಸರ್ಕಾರ

ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳು ತಮ್ಮ ಆದೇಶದಲ್ಲಿ ಅನುಮತಿ ನಿರಾಕರಿಸಲು ಹಲವು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪೊಲೀಸ್ ಇಲಾಖೆಯ ವರದಿಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Update: 2025-10-19 05:07 GMT
Click the Play button to listen to article

ರಾಜ್ಯ ಕಾಂಗ್ರೆಸ್ ಸರ್ಕಾರವು ಇದೇ ಮೊದಲ ಬಾರಿಗೆ ಅಧಿಕೃತ ಆದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹೆಸರನ್ನು ನೇರವಾಗಿ ಪ್ರಸ್ತಾಪಿಸಿ, ಅದರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಅಕ್ಟೋಬರ್ 19ರಂದು ವಿಜಯದಶಮಿ ಹಾಗೂ ಸಂಘದ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪಥಸಂಚಲನಕ್ಕೆ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ತಾಲೂಕು ಆಡಳಿತ ತಡೆ ನೀಡಿದೆ.


ಅಕ್ಟೋಬರ್ 18ರಂದು, ಕಲಬುರಗಿ ಜಿಲ್ಲಾ ಆರ್​ಎಸ್​ಎಸ್​​ ವ್ಯವಸ್ಥಾ ಪ್ರಮುಖರಾದ ಪ್ರಹ್ಲಾದ ವಿಶ್ವಕರ್ಮ ಅವರು, ಅಕ್ಟೋಬರ್ 19ರಂದು ಮಧ್ಯಾಹ್ನ 3.00 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಚಿತ್ತಾಪುರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಮನವಿಯಲ್ಲಿ, ಬಜಾಜ್ ಕಲ್ಯಾಣ ಮಂಟಪದಿಂದ ಆರಂಭಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ಚೌಕ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮತ್ತೆ ಅದೇ ಸ್ಥಳದಲ್ಲಿ ಕಾರ್ಯಕ್ರಮ ಮುಕ್ತಾಯಗೊಳಿಸುವ ಬಗ್ಗೆ ವಿವರಿಸಲಾಗಿತ್ತು.

ಸರ್ಕಾರದಿಂದ ಅನುಮತಿ ನಿರಾಕರಣೆ

ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳು ತಮ್ಮ ಆದೇಶದಲ್ಲಿ ಅನುಮತಿ ನಿರಾಕರಿಸಲು ಹಲವು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪೊಲೀಸ್ ಇಲಾಖೆಯ ವರದಿಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕೋರಿದ ಮಾರ್ಗದಲ್ಲೇ, ಅದೇ ದಿನದಂದು ಭೀಮ್ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಕೂಡ ಪಥಸಂಚಲನ ನಡೆಸಲು ಅನುಮತಿ ಕೇಳಿದ್ದವು. ಮೂರು ಸಂಘಟನೆಗಳು ಒಂದೇ ಸಮಯದಲ್ಲಿ ಒಂದೇ ಮಾರ್ಗದಲ್ಲಿ ಸಾಗಿದರೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ವರದಿ ಹೇಳಿದೆ ಎಂದು ಆದೇಶದಲ್ಲಿದೆ.

ಇತ್ತೀಚೆಗೆ ಆರ್​ಎಸ್​​ಎಸ್​​​ ಕಾರ್ಯಕರ್ತರೊಬ್ಬರು ಸ್ಥಳೀಯ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿತ್ತು. ಈ ಘಟನೆಯಿಂದಾಗಿ ಸ್ಥಳೀಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್​ಎಸ್​ಎಸ್​ ಪಥಸಂಚಲನವು ಈ ಘಟನೆಯ ಪ್ರತೀಕಾರವಾಗಿ, ಉದ್ದೇಶಪೂರ್ವಕವಾಗಿ ಆಯೋಜಿಸಲಾಗಿದೆ ಎಂದು ಭೀಮ್ ಆರ್ಮಿ ಆರೋಪಿಸಿತ್ತು.

ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆರ್​ಎಸ್​​ಎಸ್​​ ಪಥಸಂಚಲನದಿಂದ ಚಿತ್ತಾಪುರ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು. ಸಂಘಟನೆಗಳ ಮಧ್ಯೆ ಗದ್ದಲ, ಗಲಾಟೆಗಳಾಗಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿತ್ತು ಎಂಬುದಾಗಿ ಆದೇಶದಲ್ಲಿದೆ.

ಪೊಲಸರ ವರದಿಯನ್ನು ಉಲ್ಲೇಖಿಸಿ, "ಚಿತ್ತಾಪುರ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಕ್ಟೋಬರ್​ 19ರಂದು ನಡೆಯುವ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡಲು ನಿರಾಕರಿಸಿ, ಹಾಗೂ ಮನವಿ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ" ಎಂದು ತಹಶೀಲ್ದಾರ್ ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. 

Tags:    

Similar News