Road widening Plan: ಎಂ.ಜಿ.ರಸ್ತೆಯಿಂದ ಬೆಳ್ಳಂದೂರಿಗೆ ಎಂಟೇ ನಿಮಿಷದ ಪ್ರಯಾಣ!
ಲೋವರ್ ಅಗರಂನಿಂದ ಸರ್ಜಾಪುರವರೆಗಿನ ವಾಹನ ದಟ್ಟಣೆ ನಿಯಂತ್ರಿಸಲು ರಸ್ತೆ ವಿಸ್ತರಣೆಗೆ ಸರ್ಕಾರ ತೀರ್ಮಾನಿಸಿದೆ. ಒಂದು ಗಂಟೆಯ ಪ್ರಯಾಣವನ್ನು ೫ರಿಂದ ೮ ನಿಮಿಷಕ್ಕೆ ಇಳಿಸುವಂತಹ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.;
ಬೆಂಗಳೂರಿನಲ್ಲಿ ಜನ ಹಾಗೂ ವಾಹನ ಸಂಚಾರ ಹೆಚ್ಚಾದಂತೆ ಸಂಚಾರ ದಟ್ಟಣೆ ತಲೆ ನೋವಾಗಿ ಕಾಡುತ್ತಿದೆ. ವಾಹನ ದಟ್ಟಣೆ ನಿವಾರಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮೆಟ್ರೋ ಸೇವೆ, ಸುರಂಗ ಮಾರ್ಗ ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿಲ್ಲ. ಐಟಿ ಹಬ್ ಹೊಂದಿರುವ ಸರ್ಜಾಪುರ, ಅಗರಂ ಮಾರ್ಗದಲ್ಲಿ ಗಂಟೆಗಟ್ಟಲೇ ವಾಹನ ದಟ್ಟಣೆ ಇರುತ್ತದೆ.
ಲೋವರ್ ಅಗರಂನಿಂದ ಸರ್ಜಾಪುರವರೆಗಿನ ವಾಹನ ದಟ್ಟಣೆ ನಿಯಂತ್ರಿಸಲು ರಸ್ತೆ ವಿಸ್ತರಣೆಗೆ ಸರ್ಕಾರ ಈಗ ತೀರ್ಮಾನಿಸಿದೆ. ಒಂದು ಗಂಟೆಯ ಪ್ರಯಾಣವನ್ನು 5 ರಿಂದ 8 ನಿಮಿಷಕ್ಕೆ ಇಳಿಸುವಂತಹ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಲೋವರ್ ಅಗರಂನಿಂದ ಸರ್ಜಾಪುರವರೆಗಿನ ರಸ್ತೆ ವಿಸ್ತರಣೆಗಾಗಿ 12.34 ಎಕರೆ ಜಮೀನನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ ಎಂ.ಜಿ ರಸ್ತೆಯಿಂದ ಬೆಳ್ಳಂದೂರಿಗೆ ಕೇವಲ ಬೆರಳೆಣಿಕೆ ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ.
ರಕ್ಷಣಾ ಸಚಿವಾಲಯವು 12.34 ಎಕರೆ ಭೂಮಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ತಾತ್ವಿಕ ಒಪ್ಪಿಗೆ ನೀಡಿದೆ. ಲೋವರ್ ಅಗರಂನಿಂದ ಸರ್ಜಾಪುರದವರೆಗಿನ ರಸ್ತೆ ವಿಸ್ತರಣೆಗೆ ಇನ್ನೂ 10.77 ಎಕರೆ ಬಾಕಿ ಇರಲಿದೆ. ಶೀಘ್ರವೇ ಉಳಿಕೆ ಭೂಮಿಯನ್ನು ರಕ್ಷಣಾ ಸಚಿವಾಲಯ ಹಸ್ತಾಂತಿರಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಎಎಸ್ಸಿ (ಆರ್ಮಿ ಸರ್ವೀಸ್ ಕಾರ್ಪ್ಸ್ )ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಸಹಕಾರದಿಂದ ತ್ವರಿತವಾಗಿ ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಸೆ.30 ರಂದು ರೆಪ್ಸ್ವಾಲ್ ಅವರು ಸೇವೆಯಿಂದ ನಿವೃತ್ತರಾಗಿದ್ದು, ಅವರನ್ನು ಸನ್ಮಾನಿಸಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ರಕ್ಷಣಾ ಸಚಿವರು ನಮ್ಮ ಮನವಿಗೆ ಸಮ್ಮತಿಸಿದ್ದು, ರಸ್ತೆ ವಿಸ್ತರಣೆಗೆ ಸುಮಾರು 22 ಎಕರೆ ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಾರಂಭಿಕ ಹಂತದಲ್ಲಿ 3.5 ಕಿ.ಮೀ. ರಸ್ತೆ ವಿಸ್ತರಣೆಗೆ ₹35 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ರಕ್ಷಣಾ ಸಚಿವಾಲಯವು ಉಳಿದ 10.77 ಎಕರೆ ಭೂಮಿಯನ್ನು ಹಸ್ತಾಂತರಿಸಿದ ನಂತರ ಯೋಜನೆ ಪೂರ್ಣಗೊಳಿಸುತ್ತೇವೆ. ಇದರಿಂದ ಐಟಿ ಹಬ್ಗೆ ಸಂಚಾರ ಸುಗಮವಾಗಲಿದೆ ಎಂದರು.
ರಸ್ತೆ ವಿಸ್ತರಣೆಯಿಂದ ಬೆಂಗಳೂರಿನ ನಾಗರಿಕರು, ವಿಶೇಷವಾಗಿ ಬೆಂಗಳೂರು ಪೂರ್ವದ ನಾಗರಿಕರಿಗೆ ಹೆಚ್ಚು ನೆರವಾಗಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾದ ಮೇಲೆ ನನಗೆ ಪೂರ್ವ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಕುರಿತು ದಿನಕ್ಕೆ ಎಂಟರಿಂದ ಹತ್ತು ಇ ಮೇಲ್ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಶೀಲನೆ ನಡೆಸಿದ್ದೆ. ರಕ್ಷಣಾ ಸಚಿವಾಲಯದ ನೆರವಿನೊಂದಿಗೆ ರಸ್ತೆ ವಿಸ್ತರಣೆಯಾದ ನಂತರ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ವಿವರಿಸಿದರು.
ಇನ್ನು ಹೆಬ್ಬಾಳ ಬಳಿಯ ಮಿಲಿಟರಿ ಡೈರಿ ಫಾರ್ಮ್ ಬಳಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಎರಡು ಎಕರೆ ಭೂಮಿ ನೀಡುವಂತೆ ರಕ್ಷಣಾ ಇಲಾಖೆಗೆ ಸರ್ಕಾರದಿಂದ ಮನವಿ ಸಲ್ಲಿಸಲಾಗಿದೆ. ರಕ್ಷಣಾ ಇಲಾಖೆಯು ಭೂಮಿ ಹಸ್ತಾಂತರಕ್ಕೆ ಪರ್ಯಾಯವಾಗಿ ಕೆಲ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಕೋರಿದೆ. ಅದನ್ನು ಬದ್ಧತೆಯಿಂದ ನಾವು ಪೂರೈಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.