RG Kar Case | ವೈದ್ಯರ ಮುಷ್ಕರ: ಅ.17ರಂದು ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತ
ವಿಮಾನ ನಿಲ್ದಾಣಗಳಲ್ಲಿ ನೀಡುವಷ್ಟೇ ಭದ್ರತೆಯನ್ನು ಆಸ್ಪತ್ರೆಗಳಲ್ಲಿಯೂ ನೀಡಬೇಕು. ಆಸ್ಪತ್ರೆಗಳನ್ನು ಸುರಕ್ಷಿತ ವಲಯ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ;
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅ.17ರ ಗುರುವಾರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರಿಗೆ ಭಾರತೀಯ ವ್ಯದ್ಯಕೀಯ ಸಂಘ(IMA) ಕರೆ ನೀಡಿದೆ.
ಗುರುವಾರ ಮುಂಜಾನೆಯಿಂದ ಮುಸ್ಸಂಜೆಯವರೆಗೆ (ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ) ಉಪವಾಸ ಮತ್ತು ಪ್ರತಿಭಟನೆ ನಡೆಸಲು IMA ರಾಷ್ಟ್ರವ್ಯಾಪಿ ಕರೆ ನೀಡಿದೆ. ಅದರ ಭಾಗವಾಗಿ ರಾಜ್ಯದಲ್ಲಿಯೂ ಐಎಂಎ ಜೂನಿಯರ್ ಡಾಕ್ಟರ್ಸ್ ನೆಟ್‌ವರ್ಕ್ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಿದ್ದು, ಮೆಡಿಕಲ್ ಸ್ಟೂಡೆಂಟ್ ನೆಟ್‌ವರ್ಕ್ (ಎಂಎಸ್‌ಎನ್) ಪ್ರತಿಭಟನೆಯ ನೇತೃತ್ವ ವಹಿಸಲಿದೆ. IMA ಪ್ರಕಾರ, ವೈದ್ಯರು ತಮ್ಮ ತಮ್ಮ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಸೇವೆಗಳು ಇರುವುದಿಲ್ಲ. ಒಪಿಡಿ, ಶಸ್ತ್ರಚಿಕಿತ್ಸೆಗಳೂ ಇರುವುದಿಲ್ಲ ಎಂದು ತಿಳಿಸಲಾಗಿದೆ. ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಮತ್ತು ಆಸ್ಪತ್ರೆಯಲ್ಲಿ ಅಗತ್ಯ ಭದ್ರತಾ ಸಿಬ್ಬಂದಿಯ ಕೊರತೆ ಇರುವುದು ಕಂಡು ಬಂದಿದೆ. ಇದರಿಂದಾಗಿಯೇ ದುಷ್ಕರ್ಮಿಗಳು ಸುಲಭವಾಗಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾರೆ. ಕಾಲಮಿತಿಯಲ್ಲಿ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಐಎಂಎ ಆಗ್ರಹಿಸಿದೆ.
ವೈದ್ಯರ ಮೇಲೆ ಯಾವುದೇ ಹಿಂಸೆ ನಡೆಯದಂತೆ ನೀತಿ ರೂಪಿಸಬೇಕು. ಆಸ್ಪತ್ರೆಗಳಿಗೆ ರಕ್ಷಣೆ ನೀಡಲು ಈಗಿರುವ ಕಾಯ್ದೆಗೆ ತಿದ್ದುಪಡಿ ತರಬೇಕು. ವಿಮಾನ ನಿಲ್ದಾಣಗಳಲ್ಲಿ ನೀಡುವಷ್ಟೇ ಭದ್ರತೆಯನ್ನು ಆಸ್ಪತ್ರೆಗಳಲ್ಲಿಯೂ ನೀಡಬೇಕು. ಆಸ್ಪತ್ರೆಗಳನ್ನು ಸುರಕ್ಷಿತ ವಲಯ ಎಂದು ಘೋಷಿಸಬೇಕು. ಪ್ರತಿ ಹೆಜ್ಜೆಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಅಗತ್ಯ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕು. ವಿಶ್ರಾಂತಿ ಕೊಠಡಿಗಳನ್ನು ಹೆಚ್ಚಿಸಬೇಕು ಎಂದು ಐಎಂಎ ಒತ್ತಾಯಿಸಿದೆ.