ಸವಾಲು ಹಾಕಿದ ರವಿಚಂದ್ರನ್‍; ಆರು ತಿಂಗಳಲ್ಲಿ ಸಿನಿಮಾ ಮಾಡಲು ಕರೆ

ಸಿನಿಮಾ ಓಡಲಿಲ್ಲ ಎಂದು ಚಿತ್ರಮಂದಿರದ ಬಾಗಿಲಲ್ಲಿ ಕುಳಿತು ಅತ್ತರೆ, ಎಷ್ಟು ನೋವಾಗತ್ತೆ ಗೊತ್ತಾ? ಸಿನಿಮಾನ ಜನ ಹುಡುಕಿಕೊಂಡು ಬರಬೇಕು. ನಾವು ಕರೆಯೋದಲ್ಲ. ಬನ್ನಿ, ಬಿಟ್ಟಿ ಸಿನಿಮಾ ತೋರಿಸ್ತೀನಿ ಬನ್ನಿ ಎಂದರೆ ಯಾರು ಬರ್ತಾರೆ?;

Update: 2025-07-15 15:45 GMT

ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾದ ಯಾವುದೇ ಚಿತ್ರ ಯಶಸ್ವಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳೇನೋ ಆಗುತ್ತಿವೆ. ಆದರೆ, ಉತ್ತರ ಮಾತ್ರ ಸಿಗುತ್ತಿಲ್ಲ. ಪ್ರಮುಖವಾಗಿ ಚಿತ್ರ ಮಾಡುವ ರೀತಿ ಬದಲಾಗಬೇಕು ಎಂದು ಹೇಳುತ್ತಾರೆ. ಸುಮ್ಮನೆ ಒಂದು ಚಿತ್ರವನ್ನು ಎಳೆಯುವ ಬದಲು, ಬೇಗಬೇಗ ಚಿತ್ರಗಳನ್ನು ಮಾಡಿ ಮುಗಿಸುವುದಕ್ಕೆ ಅವರು ಕರೆ  ನೀಡಿದ್ದಾರೆ.

ಇತ್ತೀಚೆಗೆ ಸಿನಿಮಾ ಸಮಾರಂಭದಲ್ಲಿ ಈ ಕುರಿತು ಮಾತನಾಡಿರುವ ರವಿಚಂದ್ರನ್‍, ‘ಸಿನಿಮಾಗಳು ಓಡುತ್ತಿಲ್ಲ ಎಂದು ಎಲ್ಲ ಹೇಳುತ್ತಾರೆ. ಆದರೂ ಚಿತ್ರ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜೀವನದಲ್ಲಿ ನಂಬಿಕೆ ಬೇಕು. ನಂಬಿಕೆ ಇಲ್ಲದಿದ್ದರೆ ಹೇಗೆ? ಹಾಗೆಯೇ ಎಲ್ಲಾ ಸಿನಿಮಾಗಳು ಓಡುವುದಕ್ಕೆ ಸಾಧ್ಯವಿಲ್ಲ. ಕೆಲವು ಗೆಲ್ಲಬೇಕು, ಕೆಲವು ಸೋಲಬೇಕು. ಈ ವರ್ಷದ ಮೊದಲ ಆರು ತಿಂಗಳು ಚೆನ್ನಾಗಿಲ್ಲದರಿಬಹುದು. ಆದರೆ, ಈಗ ಸಮಯ ಚೆನ್ನಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಬರುತ್ತಿವೆ. ‘ಕೆಡಿ – ದಿ ಡೆವಿಲ್‍’ ಚಿತ್ರದ ಟೀಸರ್ ಮುಂಬೈನಲ್ಲಿ ಬಿಡಗುಡೆ ಮಾಡಿಕೊಂಡು ಬಂದಿದ್ದಾರೆ. ನಾನು ಅಭಿನಯಿಸಿರುವ ‘ಜೂನಿಯರ್’ ಚಿತ್ರವನ್ನು 70 ಕೋಟಿ ಖರ್ಚು ಮಾಡಿ ಮಾಡಿದ್ದಾರೆ. ಈಗ ಆರು ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ. ಹೀಗಿರುವಾಗ ಕಾಲ ಸರಿಯಿಲ್ಲ, ಜನ ಚಿತ್ರಗಳನ್ನು ನೋಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂಬುದು ಅವರ ಅಭಿಪ್ರಾಯ.

ಜನರೇನೋ ಚಿತ್ರ ನೋಡುವುದಕ್ಕೆ ಬರುತ್ತಿದ್ದಾರೆ, ಆದರೆ ಅವರನ್ನು ಉಳಿಸಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸುವ ರವಿಚಂದ್ರನ್, ‘ಸಿನಿಮಾ ಓಡಲಿಲ್ಲ ಎಂದು ಚಿತ್ರಮಂದಿರದ ಬಾಗಿಲಲ್ಲಿ ಕುಳಿತು ಅತ್ತರೆ, ಎಷ್ಟು ನೋವಾಗತ್ತೆ ಗೊತ್ತಾ? ಸಿನಿಮಾನ ಜನ ಹುಡುಕಿಕೊಂಡು ಬರಬೇಕು. ನಾವು ಕರೆಯೋದಲ್ಲ. ನಾವು ಫ್ರೀ ಟಿಕೆಟ್ ಕೊಡ್ತೀನಿ ಬನ್ನಿ, ಬಿಟ್ಟಿ ಸಿನಿಮಾ ತೋರಿಸ್ತೀನಿ ಬನ್ನಿ, ಅರ್ಧ ಸಿನಿಮಾ ನೋಡಿ ದುಡ್ಡು ಕೊಡಿ ಎಂದರೆ ಯಾರು ಬರ್ತಾರೆ? ಸಿನಿಮಾ ತಾಕತ್ತಿರೋದು ಸ್ಕ್ರೀನ್‍ ಮೇಲೆ. ಬೇಡಿಕೊಳ್ಳುವ ಕೆಲಸ ಯಾವತ್ತೂ ಮಾಡಬಾರದು. ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತಾ ಗೆಲ್ಲಿಸುತ್ತಾರೆ. ಹೊಸಬರಾ? ಹಳಬರಾ? ಎಂದು ಯಾವತ್ತೂ ನೋಡಿಲ್ಲ. ನಾವೆಲ್ಲಾ ಬಂದಾಗ ಹೊಸಬರೇ. ಗೆದ್ದು ಬಂದಿದ್ದೇವೆ. ಸಿನಿಮಾ ಮಾಡಿದ್ದೇವೆ. ಅವೆಲ್ಲವೂ ಜೀವನದ ಒಂದು ಭಾಗ. ಸದ್ಯ ಕೆಟ್ಟ ಸಮಯ ನಡೆಯುತ್ತಿರಬಹುದು. ಹಾಗಂತ ಸುಮ್ಮನೆ ಕೂರಬಾರದು. ಇದೊಂದು ಪಾಠವಾಗಬೇಕು’ ಎನ್ನುತ್ತಾರೆ.


ಒಂದು ಸಿನಿಮಾನ ಆರು ತಿಂಗಳಲ್ಲಿ ಮಾಡಿ ಎನ್ನುವ ರವಿಚಂದ್ರನ್‍, ‘ಶೂಟಿಂಗ್ ಶುರು ಮಾಡಿ ಆರು ತಿಂಗಳಲ್ಲಿ ಬಿಡುಗಡೆ ಮಾಡಿ. ಬೇಕಾದರೆ ಒಂದು ವರ್ಷ ಕೂತು ಬರೆಯಿರಿ. ಪೇಪರ್ ಎಷ್ಟು ಬೇಕಾದರೂ ಹರಿದು ಬಿಸಾಕಿ. ನೋಟ್‍ಗಳನ್ನು ಬಿಸಾಕಬೇಡಿ. ಮೊದಲು ಆರು ತಿಂಗಳಲ್ಲಿ ಸಿನಿಮಾ ಮಾಡಬೇಕೆಂಬ ಕಂಡೀಷನ್ ‍ಹಾಕಿ ಸಿನಿಮಾ ಮಾಡಿ. ಎಲ್ಲಾ ಹೀರೋಗಳು ಒಂದೊಂದು ಸಿನಿಮಾನ ಮೂರ್ನಾಲ್ಕು ವರ್ಷ ಮಾಡಿ ನಿರ್ಮಾಪಕರನ್ನು ಸಾಯಿಸುತ್ತಿದ್ದಾರೆ. ಆರು ತಿಂಗಳಲ್ಲಿ ಸಿನಿಮಾ ಕಾಪಿ ತೆಗೆದರೆ ನಿರ್ಮಾಪಕರು ಉಳಿಯುತ್ತಾರೆ’ ಎನ್ನುತ್ತಾರೆ ಅವರು.

ಈ ವಿಷಯವಾಗಿ ತಮ್ಮದೇ ಉದಾಹರಣೆ ಕೊಡುವ ಅವರು, ‘’ರಾಮಾಚಾರಿ’ ಚಿತ್ರವನ್ನು ಮೂರು ತಿಂಗಳಲ್ಲಿ ಮುಗಿಸಿದ್ದೇನೆ. ‘ಹಳ್ಳಿ ಮೇಷ್ಟ್ರು’ ಚಿತ್ರವನ್ನೂ ಮೂರು ತಿಂಗಳಲ್ಲಿ ಮುಗಿಸಿದ್ದೇನೆ. ‘ಶಾಂತಿ ಕ್ರಾಂತಿ’ ಚಿತ್ರ ಮೂರು ವರ್ಷ ಮಾಡಿದೆ. ರಿಸಲ್ಟ್ ಏನಾಯ್ತು? ಹಗಲು-ರಾತ್ರಿ ಕಷ್ಟಪಟ್ಟು ಸಿನಿಮಾ ಮಾಡಿ. ಯಾರು ಮಾತಾಡಿದರೂ ಮಲಯಾಳಂ ಸಿನಿಮಾ ಓಡುತ್ತೆ, ಮಲಯಾಳಂ ಸಿನಿಮಾ ಚೆನ್ನಾಗಿರುತ್ತದೆ ಎನ್ನುತ್ತಾರೆ. ನೀವು ಹೋಗಿ ಮಲಯಾಳಂ ಸಿನಿಮಾನೇ ಮಾಡಿ. ಮೊದಲು ನಿಮ್ಮ ಚಿತ್ರದ ಬಗ್ಗೆ ನಂಬಿಕೆ ಇಡಿ. ನಿಮಗೆ ನೀವೇ ಚಾಲೆಂಜ್‍ ಹಾಕಿಕೊಳ‍್ಳಿ. ನಿಮ್ಮ ಜೊತೆಗೆ ಸಿನಿಮಾ ಮಾಡುತ್ತೀನಿ ಎಂದು ಬರುವವರನ್ನು ಉಳಿಸಿಕೊಳ್ತೀರಾ? ಇಲ್ಲವೋ? ಎಂಬುದು ನಿಮಗೆ ಬಿಟ್ಟಿದ್ದು’ ಎನ್ನುತ್ತಾರೆ ರವಿಚಂದ್ರನ್‍.

Tags:    

Similar News