ರಾಮನಗರ ಜಿಲ್ಲೆಗೆ ʻಬೆಂಗಳೂರು ದಕ್ಷಿಣʼವೆಂದು ನಾಮಕರಣ: ಸಂಪುಟ ಸಭೆ ನಿರ್ಧಾರ

ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ʼಬೆಂಗಳೂರು ದಕ್ಷಿಣʼ ಎಂದು ಮರುನಾಮಕರಣ ಮಾಡಲು ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.;

Update: 2024-07-26 11:27 GMT

ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ʼಬೆಂಗಳೂರು ದಕ್ಷಿಣʼ ಎಂದು ಮರುನಾಮಕರಣ ಮಾಡಲು ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.

ಸಂಪುಟ ತೀರ್ಮಾನಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ʻʻಜನರ ಬೇಡಿಕೆ ಮೇಲೆ ಈ ನಿರ್ಣಯ ಮಾಡಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ‌ ಮಾಡಲಾಗಿದೆ. ರಾಮನಗರ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗಲಿದೆ. ಅದನ್ನು ಹೊರತುಪಡಿಸಿ ಉಳಿದ ಎಲ್ಲವೂ ಈಗ ಇರುವಂತೆ ಇರಲಿದೆ. ಇದು ಚುನಾವಣೆ ದೃಷ್ಟಿಯಿಂದ ಮಾಡಿರೋದಲ್ಲ. ಜನರ ಬೇಡಿಕೆ ಹಿನ್ನಲೆಯಲ್ಲಿ ಮಾಡಿದ್ದುʼʼ ಎಂದು ಹೇಳಿದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವುದು ಡಿಸಿಎಂ ಡಿಕೆ ಶಿವಕುಮಾರ್ ಅವರ ಬೇಡಿಕೆಯಾಗಿತ್ತು. ಆದರೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರೋಧ ಇತ್ತು. ಅಲ್ಲದೆ ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂಪುಟದಲ್ಲಿ ಇದನ್ನು ಇಟ್ಟು ಒಪ್ಪಿಗೆ ಪಡೆದುಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿತ್ತು. ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ಇತರ ತೀರ್ಮಾನಗಳು

  •  ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯೇಲ್ ಅವರು ಐದು ದಿನಕ್ಕೆ ನಿವೃತ್ತರಾಗಲಿದ್ದಾರೆ. ಮುಂದಿನ ಸಿಎಸ್ ಯಾರನ್ನು ನೇಮಕ ಮಾಡಬೇಕು ಎಂದು ಸಿಎಂಗೆ ಅಧಿಕಾರ ವಹಿಸಿದ್ದೆವು. ಶಾಲಿನಿ ರಜನೀಶ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
  •  2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಸಲ್ಲಿಸುವುದಕ್ಕೆ ವಿಶೇಷ ಅವಕಾಶ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
  •  KIADB ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ 2.64 ಎಕರೆ ಸಿ.ಎ.ನಿವೇಶನವನ್ನು ಮೆ. ಲೋಕ ಶಿಕ್ಷಣ ಟ್ರಸ್ಟ್ ರವರಿಗೆ ಹಂಚಿಕೆ ಮಾಡಲು ಅನುಮೋದನೆ. ಹಂಚಿಕೆ ಜೊತೆಗೆ ನಿವೇಶನದ ಮೊತ್ತಕ್ಕೆ 75% ರಿಯಾಯಿತಿ ನೀಡಲು ಒಪ್ಪಿಗೆ.
  •  ಅನಿಮೇಶನ್ ವಿಶ್ಯುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್‌ಗೆ (AVGC) 2.0. - "ಉತ್ಕೃಷ್ಟತಾ ಕೇಂದ್ರವನ್ನು" ರೂ.16 ಕೋಟಿಗಳ ಅಂದಾಜು ಮೊತ್ತದಲ್ಲಿ (CAPEX-ರೂ. 7.ಲ ಕೋಟಿಗಳು ಮತ್ತು OPEX-ರೂ. 9 ಕೋಟಿಗಳು) ಅನುದಾನ ನೀಡಲು ಅನುಮೋದನೆ.
  •  ಲೋಕೋಪಯೋಗಿ ಇಲಾಖೆಯಿಂದ ರಾಜ್ಯದ 15 ತಾಲ್ಲೂಕುಗಳಲ್ಲಿ ತಲಾ ಒಂದು ಹಾಸ್ಟೆಲ್‌ಗಳ ಕಟ್ಟಡಗಳನ್ನು ಒಟ್ಟು ರೂ. 105 ಕೋಟಿಗಳ ಅಂದಾಜು ಮೊತ್ತದಲ್ಲಿ (ಪ್ರತಿ ಹಾಸ್ಟೆಲ್ - ರೂ. 7 ಕೋಟಿಗಳು) ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  •  ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ "ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು 2024”ಕ್ಕೆ ಅನುಮೋದನೆ.
  •  ಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಪ್ರೌಢಶಾಲಾ ಉಪನ್ಯಾಸಕರು 55% ಅಂಕ ಪಡೆಯಬೇಕಾಗಿತ್ತು. ಅದನ್ನು ಪರಿಷ್ಕರಿಸಿ 50% ಕಡಿತಕ್ಕೆ ತೀರ್ಮಾನ.
  •  ಮಂಡ್ಯ ಕೆಆರ್ ಎಸ್ ಬೃಂದಾವನ ಉದ್ಯಾನವನವನ್ನು ಪಿಪಿಪಿಯಡಿ 2,663 ಕೋಟಿ ಮೊತ್ತದಲ್ಲಿ ಮೇಲ್ದರ್ಜೆಗೆ ಏರಿಸಲು ಆಡಳಿತಾತ್ಮಕ ಅನುಮೋದನೆ. ಟೆಂಡರ್ ಮೂಲಕ ಪಿಪಿಪಿ ಮಾದರಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡಲು ಅನುಮೋದನೆ.
Tags:    

Similar News