ರಾಜ್ಯಸಭಾ ಚುನಾವಣಾ ಕಣಕ್ಕೆ ಕುಪೇಂದ್ರ ರೆಡ್ಡಿ ಎಂಟ್ರಿ: ಕುತೂಹಲ ಮೂಡಿಸಿದ ಜೆಡಿಎಸ್- ಬಿಜೆಪಿ ತಂತ್ರ
ರಾಜ್ಯಸಭಾ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರು ಕಣಕ್ಕಿಳಿಯುವುದು ಖಚಿತವಾಗಿದ್ದು, ಗುರುವಾರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಮೂವರು ಅಭ್ಯರ್ಥಿಗಳನ್ನು ಮತ್ತು ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಘೋಷಿಸಿದೆ. ಸದ್ಯದ ಪಕ್ಷಗಳ ಬಲಾಬಲದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳು ಆಯಾ ಪಕ್ಷದ ವಿಧಾನಸಭಾ ಸದಸ್ಯರ ಮತಗಳ ಮೇಲೆ ನಿರಾಯಾಸವಾಗಿ ಜಯಗಳಿಸಲಿದ್ದಾರೆ.
ಆದರೆ, ಇದೀಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹೆಚ್ಚುವರಿ ಮತ ಮತ್ತು ಕಾಂಗ್ರೆಸ್ಸಿನ ಅಡ್ಡಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದು ಸಹಜವಾಗೇ ರಾಜ್ಯಸಭಾ ಚುನಾವಣೆಯ ಕಣವನ್ನು ರಂಗೇರಿಸಿದೆ.
ಅಸಲೀ ಲೆಕ್ಕಾಚಾರವೇನು?
ವಿಧಾನಸಭೆಯ ಒಟ್ಟಾರೆ ಸದಸ್ಯ ಬಲದ ಲೆಕ್ಕಾಚಾರದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಯಾವುದೇ ಅಭ್ಯರ್ಥಿಗೆ ಕನಿಷ್ಟ 45 ಮತಗಳು ಬೇಕಾಗುತ್ತದೆ. ಆ ಲೆಕ್ಕಾಚಾರದಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಈಗ ಕಣಕ್ಕಿಳಿಸಿರುವ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಹಾಗೇ 66 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿ, ಹೆಚ್ಚುವರಿಯಾಗಿ 21 ಮತಗಳನ್ನು ಉಳಿಸಿಕೊಳ್ಳಲಿದೆ. ಜೊತೆಗೆ 19 ಶಾಸಕರನ್ನು ಹೊಂದಿರುವ ಜೆಡಿಎಸ್, ತನ್ನ ಶಾಸಕರು ಮತ್ತು ಬಿಜೆಪಿಯ ಹೆಚ್ಚುವರಿ ಮತಗಳ ಜೊತೆಗೆ ಜನಾರ್ದನ ರೆಡ್ಡಿಯವರ ಕೆಆರ್ಪಿಪಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರ ಸರ್ವೋದಯ ಕರ್ನಾಟಕದ ತಲಾ ಒಂದು ಮತ ಹಾಗೂ ಇಬ್ಬರು ಪಕ್ಷೇತರರ ಮತಗಳನ್ನು ಸೇರಿ ಒಟ್ಟು 44 ಮತಗಳನ್ನು ಪಡೆಯಬಹುದು ಎಂಬುದು ಲೆಕ್ಕಾಚಾರ.
ಆತ್ಮಸಾಕ್ಷಿಯೋ, ಅಡ್ಡಮತವೋ?
ಆಗಲೂ ಕಡಿಮೆ ಬೀಳುವ ಪ್ರಥಮ ಪ್ರಾಶಸ್ತ್ಯದ ಒಂದು ಮತಕ್ಕೆ ಕಾಂಗ್ರೆಸ್ಸಿನ ಅಡ್ಡಮತಗಳ ಮೇಲೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಕಣ್ಣಿಟ್ಟಿದೆ. ಆದರೆ ಅದೇ ಹೊತ್ತಿಗೆ, ಜೆಡಿಎಸ್ ಮತ್ತು ಬಿಜೆಪಿಯ ಅಡ್ಡಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಪ್ರತಿತಂತ್ರ ಹೆಣೆಯುವ ಸಾಧ್ಯತೆ ಕೂಡ ಇದೆ.
ಆದರೆ, ಈಗಾಗಲೇ ಜೆಡಿಎಸ್ ನಾಯಕ ಕುಮಾರ ಸ್ವಾಮಿ ಅವರು, ತಮ್ಮ ಅಭ್ಯರ್ಥಿಗೆ ಶಾಸಕರು ಆತ್ಮಸಾಕ್ಷಿಯ ಮತ ಹಾಕಿ. ಅಡ್ಡಮತದಾನದ ಪ್ರಶ್ನೆ ಇದಲ್ಲ. ಆ ಬಗ್ಗೆ ಆರೋಪ ಮಾಡುವವರು ಈ ಹಿಂದೆ ಹೇಗೆ ನಡೆದುಕೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಹಾಗಾಗಿ ತನ್ನ ಅಬ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಇದೀಗ ಆತ್ಮಸಾಕ್ಷಿಯ ಮತದ ಮೊರೆ ಹೋಗಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು
ನಾಮಪತ್ರ ಸಲ್ಲಿಸಲು ಇಂದೇ (ಫೆ.15ರಂದೇ) ಕೊನೆಯ ದಿನವಾಗಿದ್ದು, ಎಲ್ಲಾ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ. ಫೆ.16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆ.20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ರಾಜ್ಯಸಭೆಗೆ ವಿಧಾನಸಭಾ ಸದಸ್ಯರು ಮಾಡುವ ಆಯ್ಕೆಯ ಚುನಾವಣೆ ಫೆ.27 ರಂದು ನಡೆಯಲಿದೆ. ಅಂದೇ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಕೂಡ ಹೊರಬೀಳಲಿದೆ.