ತಗ್ಗಿದ ಮಳೆ ಅಬ್ಬರ | ನದಿ ಪಾತ್ರದ ಜನರಲ್ಲಿ ನಿಲ್ಲದ ಆತಂಕ

Update: 2024-07-29 06:17 GMT
ತಗ್ಗಿದ ಮಳೆ ಅಬ್ಬರ | ನದಿ ಪಾತ್ರದ ಜನರಲ್ಲಿ ನಿಲ್ಲದ ಆತಂಕ

ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಗಾಳಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಮುಂದಿನ ಒಂದು ವಾರ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಗಾವಿ, ಧಾರವಾಡ, ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶದ, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜುಲೈ 28ರಂದು ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್‌, ಉಡುಪಿ ಜಿಲ್ಲೆಗೆ ಯೆಲ್ಲೊಅಲರ್ಟ್‌ ಘೋಷಿಸಲಾಗಿದೆ. ಜುಲೈ 29 ರಂದು ದಕ್ಷಿಣಕನ್ನಡ, ಉಡುಪಿಗೆ ಯೆಲ್ಲೊ ಮತ್ತು ಉತ್ತರಕನ್ನಡ ಜಿಲ್ಲೆಗೆ ಆರೆಂಜ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಭಾರಿ ಮಳೆ ಮುಂದುವರಿಯುವ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ 30ರಿಂದ 40 ಕಿ.ಮೀ ವೇಗದಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಹೇಳಿದೆ.

ಜುಲೈ 29ರಂದು ಬೆಳಗಾವಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಹವಾಮಾನ ಇಲಾಖೆ ಯೆಲ್ಲೊಅಲರ್ಟ್‌ ಎಚ್ಚರಿಕೆ ಕೊಟ್ಟಿದೆ. ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಸ್ಥಳಗಳಲ್ಲಿಮತ್ತು ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯು ನಿರಂತರವಾಗಿ ಬೀಸುವ ಸಂಭವವಿದ್ದು, ವೇಗವು 40 ರಿಂದ 50 ಕಿ.ಮೀ ತಲುಪಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ಆಗುಂಬೆ, ಮೂಡಿಗೆರೆಯಲ್ಲಿ ತಲಾ 16 ಸೆಂ.ಮೀ, ಸೋಮವಾರಪೇಟೆಯಲ್ಲಿ 15 ಸೆಂ.ಮೀ, ಕ್ಯಾಸಲ್‌ರಾಕ್‌ ಮತ್ತು ಶೃಂಗೇರಿಯಲ್ಲಿ ತಲಾ 14 ಸೆಂ.ಮೀ, ಗೇರುಸೊಪ್ಪ, ಲೊಂಡಾ, ನಾಪ್ಲೋಕು, ಭಾಗಮಂಡಲದಲ್ಲಿತಲಾ 11 ಸೆಂ.ಮೀ ಮಳೆ ಬಿದ್ದಿದೆ.

Tags:    

Similar News