ಶೃಂಗೇರಿ ಬಳಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ; ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಪ್ರತಿಭಟನೆ
ಇಂದು ಬೆಳಗಿನ ಜಾವ ಹಸುವಿನ ಕೊಟ್ಟಿಗೆಗೆ ಸೊಪ್ಪು ತರಲು ಸಮೀಪದ ಅರಣ್ಯಕ್ಕೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯ ತೀವ್ರತೆಯಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಕಾಡಾನೆ ದಾಳೀಗೆ ಇಬ್ಬರು ರೈತರು ಬಲಿಯಾಗಿರುವ ಘಟನೆ ನಡೆದಿದೆ. ಇಲ್ಲಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಸಾರ್ ಸಮೀಪ ಈ ದುರ್ಘಟನೆ ನಡೆದಿದೆ.
ಉಮೇಶ್ ಗೌಡ ಹಾಗೂ ಹರೀಶ್ ಶೆಟ್ಟಿ ಮೃತ ರೈತರು. ಇಂದು ಬೆಳಗಿನ ಜಾವ ಹಸುವಿನ ಕೊಟ್ಟಿಗೆಗೆ ಸೊಪ್ಪು ತರಲು ಸಮೀಪದ ಅರಣ್ಯಕ್ಕೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯ ತೀವ್ರತೆಯಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಡಾನೆ ಏಕಾಏಕಿ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಶೃಂಗೇರಿ ತಾಲೂಕಿನ ಮುಡಬಾ ಎಲ್ಸಾರ್ ಭಾಗದಲ್ಲಿ ಕಾಡಾನೆಗಳ ಉಪಟಳ ಹಲವು ವರ್ಷಗಳಿಂದ ಇದೆ. ಸುತ್ತಮುತ್ತಲಿನ ಗ್ರಾಮಗಳ ಹಲವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪರಿಹಾರ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಹರೀಶ್ ಶೆಟ್ಟಿ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ, ಉಮೇಶ್ ಗೌಡ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಎರಡೂ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಕಾಡಾನೆ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಕರ್ನಾಟಕ ಜನಶಕ್ತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಅವರು, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಪದೇ ಪದೇ ಕಾಡಾನೆ ದಾಳಿ ನಡೆಯುತ್ತಿದೆ. ಮೊದಲು ಈ ಭಾಗದಲ್ಲಿ ಆನೆಗಳ ಹಾವಳಿ ಇರಲಿಲ್ಲ, ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಜನರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಹಿಡಿದ ಕಾಡಾನೆಗಳನ್ನು ಮತ್ತೆ ಇದೇ ಭಾಗಕ್ಕೆ ಬಿಡುವುದರಿಂದ ಪರಿಸ್ಥಿತಿ ಗಂಭೀರವಾಗುತ್ತಿದೆ. ಇಂದು ಇಬ್ಬರು ಸಾವು ಸಂಭವಿಸಿರುವುದು ಇಲಾಖೆಯ ನಿಷ್ಕ್ರಿಯತೆಯ ಕಾರಣ ಎಂದು ದೂರಿದ್ದಾರೆ.