́ನವಂಬರ್ ಕ್ರಾಂತಿʼಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ? ಪ್ರಿಯಾಂಕ್ ಖರ್ಗೆ ನಕಾರ
ಡಿಸಿಎಂ ಆಗುವುದಕ್ಕೆ ಆರ್‌ಎಸ್‌ಎಸ್ ಟೀಕಿಸುತ್ತಿದ್ದಾರೆ," ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅ ರೀತಿಯ ಟೀಕೆಯಿಂದ ಡಿಸಿಎಂ ಆಗುವುದಾದರೆ, ಸಿಎಂ ಮಾಡಲಿ ಬಿಡಿ, ಎಂದು ಸವಾಲು ಹಾಕಿದ್ದಾರೆ.
ನವಂಬರ್ ಕ್ರಾಂತಿಯಾಗಿ ಎಐಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂಬುದನ್ನು ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ತಳ್ಳಿ ಹಾಕಿದ್ದಾರೆ.
"ಖರ್ಗೆ ಅವರು ಸಿಎಂ ಆಗುತ್ತಾರೆ," ಎನ್ನುವ ಬಿಜೆಪಿಯಿಂದ ಅಮಾನತುಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು, ಅವರು ಪ್ರತಿಕ್ರಿಯಿಸಿದರು.
"ನವೆಂಬರ್ ಕ್ರಾಂತಿ ಏನೂ ನಡೆಯಲ್ಲ. ಉತ್ತರಾಧಿಕಾರಿ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಅವರ ವೈಯಕ್ತಿಕ ವಿಚಾರ. ಸಿಎಂ ಮುಂದಿನ ಚುನಾವಣೆ ನಿಲ್ಲುವ ವಿಚಾರ ಅದು ಅವರು ವೈಯಕ್ತಿಕ ವಿಚಾರ. ಎಲ್ಲಾ ಸಮಾಜದವರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ದಲಿತ ಸಿಎಂ ವಿಚಾರ ಕೂಡಾ ಹಾಗೆ. ಅದನ್ನು ಎಲ್ಲಿ ಚರ್ಚೆ ನಡೆಸಬೇಕೋ ಅಲ್ಲೇ ನಡೆಸಬೇಕು," ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
"ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವುದಕ್ಕೆ ಆರ್‌ಎಸ್‌ಎಸ್ ಅನ್ನು ಟೀಕಿಸುತ್ತಿದ್ದಾರೆ," ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಆರ್‌ಎಸ್‌ಎಸ್ ಅನ್ನು ಟೀಕಿಸಿದರೆ ಡಿಸಿಎಂ ಆಗುವುದಾದರೆ, ಡಿಸಿಎಂ ಯಾಕೆ ಸಿಎಂ ಮಾಡಲಿ ಬಿಡಿ," ಎಂದು ಪ್ರತಿಕ್ರಿಯಿಸಿದರು.
ಆರ್‌ಎಸ್‌ಎಸ್ ಪಥಸಂಚಲನ
ಆರ್‌ಎಸ್‌ಎಸ್ ಪಥಸಂಚಲನ ವಿಚಾರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ತಮ್ಮನ್ನು ಭೇಟಿಯಾದ ವರದಿಗಾರರೊಂದಿಗೆ ಮಾತನಾಡಿದ ಸಚಿವರು ಅದೇ ದಿನದಂತೆ ಅಲ್ಲೇ ಪಥಸಂಚಲನ ಮಾಡುತ್ತೇವೆ ಎಂದು ಆರ್‌ಎಸ್‌ಎಸ್ ಹೇಳಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಕೂಡಾ ಅದೇ ದಿನ ಅಲ್ಲೇ ತಾವೂ ಪಥಸಂಚಲನ ಮಾಡುವುದಾಗಿ ಅರ್ಜಿ ಸಲ್ಲಿಸಿವೆ. ಪ್ರಸ್ತುತ ಈ ವಿಚಾರ ಹೈಕೋರ್ಟ್ ನಲ್ಲಿದೆ. ಹೈಕೋರ್ಟ್ ತಿರ್ಮಾನ ಏನು ಬರುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.
"ಪಥಸಂಚಲನದಲ್ಲಿ ಭಾಗವಹಿಸಲು ಕೆಲವರಿಗೆ ಕರೆ ನೀಡಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಆ ಬಗ್ಗೆ ವಿಚಾರಿಸಿದಾಗ ಆ ವಿದ್ಯಾರ್ಥಿಗಳಿಗೆ ದೇಶಭಕ್ತಿ ಕುರಿತು ಹೇಳಲಾಗುತ್ತಿದೆ ಎನ್ನುವುದನ್ನು ಹೊರತುಪಡಿಸಿ ಬೇರೆ ಮಾಹಿತಿ ನೀಡಿಲ್ಲ ಎಂದು ಗೊತ್ತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಹಾಗೂ ಸಮಾಜದ ಶಾಂತಿ ಕಾಪಾಡಲು ಆರ್‌ಎಸ್‌ಎಸ್ ಅಷ್ಟೇ ಅಲ್ಲ ಬೇರೆ ಯಾವುದೇ ಸಂಘಟನೆಗಳಿಗೂ ಸರ್ಕಾರಿ ಜಾಗ ಬಳಸಿಕೊಳ್ಳದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಅದರಲ್ಲೇನು ತಪ್ಪಿದೆ ?," ಎಂದರು.
"ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಹೈಕೋರ್ಟ್ ಆದೇಶ ಇದೆ. ಆದರೆ, ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ನವರು ಪೊಲೀಸರ ಅನುಮತಿ ಪಡೆಯದೆ ಕೇವಲ ಮಾಹಿತಿಗಾಗಿ ಎಂದು ಬರೆದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಸಾವಿರಾರು ಜನರು ಸೇರಬೇಕಾದರೆ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕೇ ಹೊರತು ಮಾಹಿತಿ ನೀಡುವಂತಿಲ್ಲ. ಆರ್‌ಎಸ್‌ಎಸ್ ಇದನ್ನು ಅನುಸರಿಸುವುದಾದರೆ, ನಾವೂ ಅನುಸರಿಸುತ್ತೇವೆ ಎಂದು ಇತರರು ಪ್ರಶ್ನೆ ಮಾಡಿದ್ದಾರೆ," ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
"ಸರ್ಕಾರದ ಆದೇಶದ ನಂತರ, ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ನನ್ನ ಮೇಲೆ ಮುಗಿಬಿದ್ದರು. ಬಿಜೆಪಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ.? ನಾನು ಪತ್ರ ಬರೆದ ನಂತರ ಸಾವಿರಾರು ಕರೆಗಳು ಬಂದವು. ಖರ್ಗೆ ಇದನ್ನು ಬಿಜೆಪಿಯವರು ಪ್ರಚಾರಕ್ಕೆ ಮಾಡುತ್ತಿದ್ದಾರೆ ಎಂದರು. ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ ನನಗೆ ಯಾಕೆ ಪ್ರಚಾರ? ಒಬ್ಬ ಕರೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ವರ್ಗದವರನ್ನು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಲಿಲ್ಲ. ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಅವನನ್ನು ಅರೆಸ್ಟ್ ಮಾಡಿದ್ದಾರೆ. ನನಗೆ ಕರೆ ಮಾಡಿದ ವ್ಯಕ್ತಿ ತನ್ನ ಕಣಕಣದಲ್ಲಿಯೂ ಆರ್‌ಎಸ್‌ಎಸ್ ಇದೆ ಅಂದಿದ್ದಾನೆ. ಆದರೆ ಆತ ಬಡ ಕುಟುಂಬದವನು. ಆತನನ್ನು ಪ್ರಚೋದಿಸಿದವರು ಯಾರು ಅವರಿಗೂ ಶಿಕ್ಷೆಯಾಗಬೇಕಲ್ಲವೇ?" ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
"ಕಲಬುರಗಿ ಸೇರಿದಂತೆ ಎಲ್ಲ ಕಡೆ ಮಾಹಿತಿ ನೀಡಿದ್ದಾರೆ ಹೊರತು ಅನುಮತಿ ಕೇಳಿಲ್ಲ. ಇವರು ಕೇಳಿದ ತಕ್ಷಣ ಭದ್ರತೆ ಕೊಡಲು ಪೊಲೀಸರಿಗೇನು ಕೆಲಸ ಇಲ್ಲವೇ? ಚಿತ್ತಾಪುರದಲ್ಲಿ ಅನುಮತಿ ನಿರಾಕರಿಸಿದ್ದರಿಂದ ಹೈಕೋರ್ಟ್ ಗೆ ಹೋದರು. ಇತರರು ಕೂಡಾ ನಮಗೂ ಅನುಮತಿ ಕೊಡಿ ಎಂದರು. ನೋಂದಣಿಯಾಗದ ಒಂದು ಸಂಸ್ಥೆಯ ಕಾರ್ಯಕರ್ತರು ಕೈಯಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಮಾಡಿದರೆ, ಸಾರ್ವಜನಿಕರಿಗೆ ಭೀತಿ ಆಗುವುದಿಲ್ಲವೆ? ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರರು?," ಎಂದು ಪ್ರಶ್ನಿಸಿದರು.
ನೊಟೀಸ್ ಜಾರಿ
"ಬೇರೆ ಕಡೆ ನಡೆದ ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ವೀಸ್ ರೂಲ್ಸ್ ಪ್ರಕಾರ ಕ್ರಮ ಜರುಗಿಸಲಾಗುವುದು. ಕೇಂದ್ರ ಸರ್ಕಾರದ ಆದೇಶ ರಾಜ್ಯ ಸರ್ಕಾರದ ನೌಕರರಿಗೂ ಅನ್ವಯವಾಗುತ್ತದೆ ಎಂದು ಭಾವಿಸಿದ್ದಾರೆ,"ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಈ ಎಲ್ಲ ಬೆಳವಣಿಗೆ ನಂತರ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಮಾಡಲಿ ಬಿಡಿ. ಪ್ರಶ್ನೆ ಎತ್ತಿದ್ದು ನಾನೇ ತಾನೆ. ಬೇರೆಯವರ ಐಡಿಯಾಲಜಿ ಬಗ್ಗೆ ನಾನು ಹೇಳುವುದಿಲ್ಲ. ನನ್ನ ಐಡಿಯಾಲಜಿ, ಸಿಎಂ ಅವರ ಐಡಿಯಾಲಜಿ, ಖರ್ಗೆ ಸಾಹೇಬರ ಐಡಿಯಾಲಜಿ, ರಾಹುಲ್ ಗಾಂಧಿಯವರ ಐಡಿಯಾಲಜಿ ಸರಿ ಇದೆಯಲ್ಲ ಅಷ್ಟು ಸಾಕು ಎಂದರು.
ಸೇಡಂನಲ್ಲಿ ಕಾನೂನು ಉಲ್ಲಂಘನೆ ಮಾಡಿ ಪಥ ಸಂಚಲನ ಮಾಡಿದ್ದಾರೆ. ಅದನ್ನು ಕೋರ್ಟ್ ಗಮನಕ್ಕೆ ತರಲಾಗುವುದು ಎಂದ ಸಚಿವರು ಎಲ್ಲವೂ ಪರಿಗಣನೆ ಆಗುತ್ತದೆ ಎಂದ ಸಚಿವರು, ಅಂದಿನ ಶಾಂತಿ ಸಭೆಯಲ್ಲಿ ಆರ್ ಎಸ್ ಎಸ್ ಬದಲು ಬಿಜೆಪಿಯವರಿಗೇನು ಕೆಲಸ? ಅಶೋಕ್ ಪಾಟೀಲ್ ಯಾಕೆ ಅಂದಿನ ಶಾಂತಿ ಸಭೆಗೆ ಹೋಗಿಲ್ಲ.? ಅವರ ಬದಲು ಬಿಜೆಪಿಯವರು ಯಾಕೆ ಹೋಗಿದ್ದರು? ಅವರು ಶಾಂತಿ ಸಭೆಗೆ ಬಂದಿದ್ದರೋ ಅಥವಾ ಭಂಗ ಉಂಟು ಮಾಡಲು ಬಂದಿದ್ದರೋ? ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಪಥಸಂಚಲನ ವಿಚಾರದಲ್ಲಿ ಗೊಂದಲ ಸೃಷ್ಠಿಸುತ್ತಿರುವವರು ಯಾರು ? ಲಾಠಿ ಹಿಡಿಯುವ ವಿಚಾರದಲ್ಲಿ ಎಲ್ಲಾ ಕಡೆ ಏನೂ ತಕರಾರು ಇಲ್ಲ ಚಿತ್ತಾಪುರದಲ್ಲಿ ಮಾತ್ರವೇ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿತ್ತಾಪುರದಲ್ಲಿ ಕಾನೂನು ಇದೆ. ಹಾಗೆ ಎಲ್ಲಕಡೆಯೂ ಇದೆ. ಆದರೆ ಚಿತ್ತಾಪುರ ಯುವಕರ ಭವಿಷ್ಯದ ಪ್ರಶ್ನೆ ಬಂದಾಗ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ಈಗ ವಿಚಾರ ಹೈಕೋರ್ಟ್ ನಲ್ಲಿದೆ. ಲಾಠಿಹಿಡಿದುಕೊಂಡು ಪಥಸಂಚಲನ ನಡೆಸಲು ಅನುಮತಿ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ.
ಆರ್ ಎಸ್ ಎಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್ ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು ಎಂದರು.