ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್, ಪವಿತ್ರಾಗೌಡ ವಿರುದ್ಧ ದೋಷಾರೋಪ ನಿಗದಿ ನ.3ಕ್ಕೆ ಮುಂದೂಡಿಕೆ
ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಸ್ವಲ್ಪ ಕಾಲಾವಕಾಶಕ್ಕೆ ಮನವಿ ಮಾಡಿದರು. ದರ್ಶನ್ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ನವೆಂಬರ್ 3ರಂದು ದೋಷಾರೋಪ ಹೊರಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ನ. 3ರಂದು ಅಧಿಕೃತವಾಗಿ ದೋಷಾರೋಪ ಹೊರಿಸಲು ನ್ಯಾಯಾಲಯ ನಿರ್ಧರಿಸಿದೆ.
ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂದು ಆರೋಪಿಗಳ ಮೇಲೆ ದೋಷಾರೋಪ ಹೊರಿಸುವುದನ್ನು ನಿಗದಿ ಮಾಡಲಾಗಿತ್ತು. ಜೈಲಿನಿಂದಲೇ ಆರೋಪಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶರು “ಇಂದೇ ದೋಷಾರೋಪ ಹೊರಿಸಲಾಗುತ್ತದೆ” ಎಂದು ಹೇಳಿದರು.
ಈ ವೇಳೆ ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಸ್ವಲ್ಪ ಕಾಲಾವಕಾಶಕ್ಕೆ ಮನವಿ ಮಾಡಿದರು. ದರ್ಶನ್ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ನವೆಂಬರ್ 3ರಂದು ದೋಷಾರೋಪ ಹೊರಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದರು.
ನ. 3ರಂದು ಕಡ್ಡಾಯ ಹಾಜರಾತಿ
ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳು ನ.3 ರಂದು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕು. ಹಾಜರಾಗದಿದ್ದರೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.
ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧ ಕೊಲೆ, ಹಲ್ಲೆ, ಅಪಹರಣ, ಸಾಕ್ಷ್ಯ ನಾಶ ಹಾಗೂ ಷಡ್ಯಂತ್ರ ಆರೋಪದಡಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ದೋಷಾರೋಪ ಹೊರಿಸಿದ ಬಳಿಕ ವಾದ-ಪ್ರತಿವಾದಗಳು ನಡೆಯಲಿವೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ದರ್ಶನ್ ಆಪ್ತರ ವಿರುದ್ಧ ಚಿತ್ರದುರ್ಗ ಪೋಲಿಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ಹಂತದಲ್ಲಿ ಸಾಕ್ಷ್ಯಾಧಾರಗಳು ಹಾಗೂ ದೂರವಾಣಿ ಕರೆ ವಿವರಗಳ ಆಧಾರದ ಆರೋಪಿಗಳನ್ನು ಬಂಧಿಸಲಾಗಿತ್ತು.