ಪಣತ್ತೂರು-ಬಳಗೆರೆ ರಸ್ತೆಯಲ್ಲಿ ಫುಟ್‌ಪಾತ್ ತೆರವು; ಕಾಮಗಾರಿ ಪರಿಶೀಲಿಸಲು ರಸ್ತೆಗಿಳಿದ ಜಿಬಿಎ ಆಯುಕ್ತ
ಪಣತ್ತೂರು ರೈಲ್ವೆ ಹಳಿ ಸಮೀಪದ 4 ಮನೆಗಳಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಹಸ್ತಾಂತರ ಮಾಡಿಕೊಳ್ಳಬೇಕಿದೆ. ಈ ಸಂಬಂಧ ಜಾಗದ ಮಾಲೀಕರಿಗೆ ಶೀಘ್ರ ಪರಿಹಾರ ನೀಡುವಂತೆ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಕಾಮಗಾರಿ ಪರಿಶೀಲನೆ ಮಾಡಿದರು.
ಪಣತ್ತೂರು ಎಸ್.ಕ್ರಾಸ್ ಹಾಗೂ ಬಳಗೆರೆ ರಸ್ತೆಯ ಪಾದಚಾರಿ ಮಾರ್ಗದ ಒತ್ತುವರಿಯನ್ನು ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿ ಹಾಗೂ ಅಧಿಕಾರಿಗಳು ತೆರವು ಮಾಡಿದರು. ವಿಳಂಬವಾಗುತ್ತಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಶುಕ್ರವಾರ (ಅ.31) ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಈಗಾಗಲೇ 1 ಕಿ.ಮೀ ಡಾಂಬರೀಕರಣ ಮಾಡಲಾಗಿದೆ. ಪಣತ್ತೂರು ಗ್ರಾಮದಲ್ಲಿ 500 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಪ್ರಗತಿಯಲ್ಲಿದೆ. ಒಂದು ಲೇಯರ್ ಕಾಂಕ್ರೀಟ್ ಹಾಕಲಾಗಿದ್ದು, ಮತ್ತೊಂದು ಲೇಯರ್ ಅನ್ನು ತ್ವರಿತವಾಗಿ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು.
ಪಣತ್ತೂರು ರೈಲ್ವೆ ಹಳಿ ಸಮೀಪದ 4 ಮನೆಗಳಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಹಸ್ತಾಂತರ ಮಾಡಿಕೊಳ್ಳಬೇಕಿದೆ. ಈ ಸಂಬಂಧ ಜಾಗದ ಮಾಲೀಕರಿಗೆ ಶೀಘ್ರ ಪರಿಹಾರ ನೀಡಿ, ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಪಣತ್ತೂರು ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ಒತ್ತುವರಿಗಳನ್ನು ಗುರುತಿಸಿ ತೆರವುಗೊಳಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಸ್ಲ್ಯಾಬ್ ಅಥವಾ ಇತರ ಸಮಸ್ಯೆಗಳಿದ್ದರೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈಲ್ವೆ ಇಲಾಖೆಯ ನಾಮಫಲಕ ಅಳವಡಿಸಿ
ಪಣತ್ತೂರು ರೈಲ್ವೆ ಹಳಿ ಬಳಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂಬ ನಾಮಫಲಕ ಅಳವಡಿಸಬೇಕು. ರೈಲ್ವೆ ಇಲಾಖೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕಾಲುವೆ ಕಾಮಗಾರಿ ಪೂರ್ಣಗೊಳಿಸಿ
ಬಳಗೆರೆ ರಸ್ತೆಯ ಸುಮಾರು 700 ಮೀಟರ್ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದೆ. ಅಲ್ಲಿ ಕೂಡಲೇ ಡಾಂಬರೀಕರಣ ಮಾಡಬೇಕು. ಮಳೆಗಾಲದ ವೇಳೆ ಬಳಗೆರೆ ರಸ್ತೆ ಜಲಾವೃತವಾಗುತ್ತದೆ. ಇದನ್ನು ತಪ್ಪಿಸಲು ರಸ್ತೆ ಪಕ್ಕದಲ್ಲಿ ಹೊಸದಾಗಿ ಮಳೆನೀರು ಸರಾಗವಾಗಿ ಹರಿದುಹೋಗಲು ಕಾಲುವೆ ನಿರ್ಮಾಣ ಪ್ರಗತಿ ಕಾಮಗಾರಿ ಪ್ರಗತಿಯಲ್ಲಿದೆ. ಬಳಗೆರೆ ರಸ್ತೆ ಟಿ-ಜಂಕ್ಷನ್ (ಎಸ್‌ಟಿಪಿ ಬಳಿ) ಭಾಗದಲ್ಲಿ ರಸ್ತೆ ಕಿರಿದಾಗಿರುವುದರಿಂದ ಕಾಲುವೆ ಮೇಲೆ ಹೆಚ್ಚುವರಿ ಸ್ಲ್ಯಾಬ್ ಅಳವಡಿಸಿ ರಸ್ತೆ ಅಗಲೀಕರಣ ಮಾಡಿ ವಾಹನ ಸಂಚಾರ ಸುಗಮಗೊಳಿಸಲು ಸೂಚನೆ ನೀಡಿದರು.
ದೇವರಬೀಸನಹಳ್ಳಿ ಜಂಕ್ಷನ್ ಅಭಿವೃದ್ಧಿ
ದೇವರಬೀಸನಹಳ್ಳಿ ಜಂಕ್ಷನ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಮೇಲ್ಸೇತುವೆ ಕೆಳಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅದಕ್ಕೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಜಂಕ್ಷನ್ ಸುತ್ತಮುತ್ತ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಮರಗಳು ಮತ್ತು ಗೋಡೆಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಿರುವವರ ವಿರುದ್ಧ ದೂರು ದಾಖಲಿಸಿ ದಂಡ ವಿಧಿಸಲು ಹೇಳಿದರು.
ಮುಖ್ಯ ಆಯುಕ್ತರು ನೀಡಿದ ಪ್ರಮುಖ ನಿರ್ದೇಶನಗಳು
ಪಾದಚಾರಿ ಮಾರ್ಗಗಳಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ತೆರವುಗೊಳಿಸಬೇಕು. ಹೊರ ವರ್ತುಲ ರಸ್ತೆ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡಬೇಕು. ಗ್ಲೋಬಲ್ ಟೆಕ್ನಾಲಜಿ ಪಾರ್ಕ್ ಗೇಟ್ ಮುಂಭಾಗ ಗಿಡ ನೆಡುವ ಸಲುವಾಗಿ ಪಾದಚಾರಿ ಮಾರ್ಗದಲ್ಲಿ ಅಡ್ಡಲಾಗಿ ಅಳವಡಿಸಿರುವ ಸಿಮೆಂಟ್ ತೆರವುಗೊಳಿಸುವುದು. ಪಾದಚಾರಿ ಮಾರ್ಗದಲ್ಲಿ ನಾಗರಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಗೇಲ್ ಗ್ಯಾಸ್ ಕಬ್ಬಿಣದ ನಾಮಫಲಕ ತೆರವುಗೊಳಿಸುವುದು. ಎಕೋಸ್ಪೇಸ್ ಬಳಿ ರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆ ಕೆಟ್ಟ ಸ್ಥಿತಿಯಲ್ಲಿರುವುದರಿಂದ, ಹೊಸ ವಿನ್ಯಾಸ ಮಾಡಿಸಿ ಸಮಸ್ಯೆ ಬಗೆಹರಿಸಬೇಕು. ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸಿಎಸ್‌ಆರ್ ಅನುದಾನದಡಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಕ್ರಮವಹಿಸಿ, ಪಾದಚಾರಿ ಮಾರ್ಗದಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಸಂಬಂಧಿತರಿಗೆ ದಂಡ ವಿಧಿಸಬೇಕು. ಬೆಳ್ಳಂದೂರು ಜಂಕ್ಷನ್ ಬಳಿ ಪಾದಚಾರಿ ಮಾರ್ಗದ ಅಭಾವವಿರುವುದರಿಂದ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.