ವಯನಾಡು ಜಾಹೀರಾತು: ಕೆಎಸ್‌ಟಿಡಿಸಿ ಎಡವಟ್ಟು; ವಿವಾದ ಸೃಷ್ಟಿಸಿದ ನಿಗಮದ ನಡೆ
“ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಡಿಸಿಎಲ್ ಕೇರಳ ಸರ್ಕಾರದ ಭಾಗವಾಗಿದೆಯೇ?” ಎಂದು ಪ್ರಶ್ನಿಸಿ, ಕರ್ನಾಟಕ ಪ್ರವಾಸೋದ್ಯಮ ನಿಗಮದ ನಡೆಯನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತರಾಟೆ ತೆಗೆದುಕೊಂಡಿದ್ದಾರೆ.
ಕೇರಳದ ವಯನಾಡು ಪ್ರವಾಸ ತಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಡಿಸಿಎಲ್) ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಪ್ರಚಾರ ತೀವ್ರ ವಿವಾದಕ್ಕೆ ಕಾರಣವಾಗಿದೆ.
“ಮಂಜಿನ ಹೊದಿಕೆಯಲ್ಲಿ ಸುಂದರ ವಯನಾಡು ನಿಮಗಾಗಿ ಕಾಯುತ್ತಿದೆ” ಎಂಬ ಶೀರ್ಷಿಕೆಯಡಿ ಕೆಎಸ್‌ಟಿಡಿಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡಿರುವುದನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಖಂಡಿಸಿದ್ದಾರೆ. ಕೇರಳದ ವಯನಾಡು ಬೆಟ್ಟಗಳು ಪ್ರವಾಸಿಗರನ್ನು ಆಕರ್ಷಿಸುವಂತಿವೆ. ಆದರೆ, ಈ ಪೋಸ್ಟ್ ಅನ್ನು ಕರ್ನಾಟಕದ ಸರ್ಕಾರಿ ನಿಗಮವೇ ಪ್ರಕಟಿಸಿರುವುದು ಸರಿಯಲ್ಲ ಎಂದಿದ್ದಾರೆ.
“ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಡಿಸಿಎಲ್ ಕೇರಳ ಸರ್ಕಾರದ ಭಾಗವಾಗಿದೆಯೇ?” ಎಂದು ಪ್ರಶ್ನಿಸಿ, ನಿಗಮದ ನಡೆಯನ್ನು ಸಿ.ಟಿ.ರವಿ ತರಾಟೆ ತೆಗೆದುಕೊಂಡಿದ್ದಾರೆ. ಕರ್ನಾಟಕದ ಪ್ರವಾಸೋದ್ಯಮ ನಿಗಮವು ಬೇರೆ ರಾಜ್ಯದ ತಾಣಗಳನ್ನು ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು. ಕಾಂಗ್ರೆಸ್ ಸರ್ಕಾರ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಮೆಚ್ಚಿಸಲು ಇಂತಹ ಪ್ರಯತ್ನ ನಡೆಸಿದೆ. ಈ ಹಿಂದೆ ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಿತ್ತು. ಈಗ ಅಲ್ಲಿನ ಪ್ರವಾಸಿ ತಾಣಗಳನ್ನು ಪ್ರಚಾರ ಮಾಡಿ, ಕನ್ನಡಿಗರನ್ನು ಕರೆದೊಯ್ಯುತ್ತಿರುವುದು ಏಕೆ?, ಕರ್ನಾಟಕದಲ್ಲೇ ವಯನಾಡಿನಂತಹ ಪ್ರಕೃತಿ ಸೌಂದರ್ಯ ಹೊಂದಿರುವ ಮಡಿಕೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿವೆ. ಇಲ್ಲೇಕೆ ಪ್ರವಾಸಕ್ಕೆ ಕರೆದೊಯ್ಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ʼಮಂಜಿನ ಹೊದಿಕೆಯಲ್ಲಿ ಸುಂದರ ವಯನಾಡ್ ನಿಮಗಾಗಿ ಕಾಯುತ್ತಿದೆʼ ಎಂದು ಕೆಎಸ್‌ಡಿಸಿಎಲ್ ಅಧಿಕೃತ ಟ್ವೀಟರ್‌ನಲ್ಲಿ 2 ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ. ಮಂಜಿನ ಹೊದಿಕೆಯೊಳಗೆ ಸುಂದರ ಮಡಿಕೇರಿ, ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದರೇ, ಕನ್ನಡಿಗರು ಮೆಚ್ಚಿಕೊಳ್ಳುತ್ತಿದ್ದರು. ಇದು ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಮಾಡಬೇಕಾಗಿದ್ದ ಕೆಲಸ. ಅದು ಬಿಟ್ಟು ಕೇರಳದ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಕೆಲಸವನ್ನು ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹೊರ ಗುತ್ತಿಗೆ ಪಡೆಯಿತೇ ಎಂಬ ಪ್ರಶ್ನೆಯು ಕನ್ನಡಿಗರ ಮನಸ್ಸಿನಲ್ಲಿ ಉದ್ಭವವಾಗಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಕೇರಳದ ವಯನಾಡ್‌ಗೆ ಕರ್ನಾಟಕ ಪ್ರವಾಸೋದ್ಯಮ ನಿಗಮದ ವತಿಯಿಂದ ಎರಡು ರಾತ್ರಿ ಮತ್ತು ಮೂರು ದಿನದ ಪ್ರವಾಸ ಆಯೋಜಿಸಲಾಗಿದೆ.
ವಿವಾದದ ಬೆನ್ನಲ್ಲೇ ನೋಟಿಸ್ ಜಾರಿ
ವಯನಾಡು ಪ್ರವಾದ ಕುರಿತು ಪ್ರಚಾರ ನೀಡಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೇಳಿ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಕೆಎಸ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿ, ವರದಿ ಕೇಳಿದ್ದಾರೆ. ಕರ್ನಾಟಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಗಮದಲ್ಲಿ ಬೇರೆ ರಾಜ್ಯದ ಪ್ರವಾಸ ತಾಣಕ್ಕೆ ಪ್ರಚಾರ ನೀಡಿದ್ದು ಹೇಗೆ, ಇದರಲ್ಲಿ ಎಂದು ಪ್ರಶ್ನಿಸಿದ್ದಾರೆ.
ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟನೆ
ವಯನಾಡು ಪ್ರವಾಸ ಯೋಜನೆ 2019ರಲ್ಲೇ ರೂಪಿಸಲಾಗಿತ್ತು. ಆ ಸಮಯದಲ್ಲಿ ನಿಗಮವು ಅಂತಾರಾಜ್ಯ ಪ್ರವಾಸ ಪ್ಯಾಕೇಜ್‌ಗಳ ಭಾಗವಾಗಿ ವಯನಾಡನ್ನು ಸೇರಿಸಿತ್ತು. 2020ರಲ್ಲಿ ಕೋವಿಡ್-19 ಮಹಾಮಾರಿಯಿಂದ ಯೋಜನೆ ಸ್ಥಗಿತಗೊಂಡಿತ್ತು. ಇದೀಗ 2024–25ನೇ ಸಾಲಿನಿಂದ ಯೋಜನೆ ಪುನರಾರಂಭಿಸಲಾಗಿದೆ ಎಂದು ಕೆಎಸ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ವಯನಾಡು ಪ್ರಚಾರದ ಉದ್ದೇಶ ಕೇರಳದ ಪರವಲ್ಲ, ರಾಜ್ಯ ಹಾಗೂ ಅಂತಾರಾಜ್ಯ ಪ್ರವಾಸ ವಹಿವಾಟು ಉತ್ತೇಜಿಸುವುದಾಗಿದೆ. ನಿಗಮವು ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ, ಪ್ರಚಾರಪಡಿಸುವ ಹಾಗೂ ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೇರೆ ರಾಜ್ಯಗಳ ಪ್ರವಾಸಿ ತಾಣಗಳನ್ನು ಪ್ರಚಾರಪಡಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ನಿಂದ ಪ್ರಾರಂಭವಾದ ಈ ವಿವಾದ ಈಗ ಆಡಳಿತಾತ್ಮಕ ತನಿಖೆಯ ಹಂತಕ್ಕೂ ತಲುಪಿದೆ. ಪ್ರವಾಸೋದ್ಯಮ ಸಚಿವರು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಲೋಪವಾಗದಂತೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.