ಪೊಲೀಸರ ಭ್ರಷ್ಟಾಚಾರ| ಬೆಳಕಿಗೆ ಬಂದರೆ ಮುಲಾಜಿಲ್ಲದೆ ವಜಾ; ಪರಮೇಶ್ವರ್‌ ಎಚ್ಚರಿಕೆ

ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಪೊಲೀಸರನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಒಳಪಡಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Update: 2025-10-31 15:51 GMT

ಸಾಂದರ್ಭಿಕ ಚಿತ್ರ

Click the Play button to listen to article

ಪೊಲೀಸ್‌ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಅಕ್ರಮಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್‌ ಅವರ ಪುತ್ರಿ ಅಕಾಲಿಕ ಮರಣ ಸಂಬಂಧ ಎಫ್‌ಐಆರ್‌ ದಾಖಲಿಸಲು ಲಂಚ ಪಡೆದ ಆರೋಪದ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ಪೊಲೀಸರ ತಲೆದಂಡವಾಗಿದೆ. ಪಿಎಸ್‌ಐ ಸಂತೋಷ್ ಹಾಗೂ ಕಾನ್‌ಸ್ಟೇಬಲ್ ಗೋರಮ್‌ನಾಥ್‌ ಅಮಾನತುಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಲಂಚಾವತಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್‌ ಪೋಸ್ಟ್ ಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಅವರು, ಈ ಇಬ್ಬರನ್ನು ಅಮಾನತುಗೊಳಿಸಿದ್ದಾರೆ. ಅಧಿಕಾರಿ ಮಗಳು ಅಕ್ಷಯಾ ಟ್ರೈನ್ ಹ್ಯಾಮರೇಜ್ ಕಾರಣದಿಂದ ಮೃತಪಟ್ಟಿದ್ದರು. ಈ ಬಗ್ಗೆ ಕೇಸ್ ದಾಖಲಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಆದ್ದರಿಂದ ಇವರನ್ನು ಅಮಾನತು ಮಾಡಲಾಗಿದೆ ಎಂದರು.

ಅಧಿಕಾರಿ ಹಾಗೂ ಸಿಬ್ಬಂದಿಗಳು ಇಂತಹ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಹಲವಾರು ಬಾರಿ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹಣ ಕಡಿಮೆ ಅಥವಾ ಹೆಚ್ಚಾಗಿರಬಹುದು. ಮಾಹಿತಿ ಸಿಕ್ಕ ತಕ್ಷಣ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವವರನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಒಳಪಡಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ಸರ್ಕಾರ ಪ್ರವರ್ಗ ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಿ ಆದೇಶ ಮಾಡಿತ್ತು. ಒಳ ಮೀಸಲು ಸಮರ್ಪಕ ಜಾರಿಗೆ ಸುಗ್ರೀವಾಜ್ಞೆ ತರುವಂತೆ ಹಲವು ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮಸೂದೆ ಹೊರಡಿಸಲಾಗುವುದು. ಆದರೆ ಇದು ಕೆಲವರಿಗೆ ಅರ್ಥವಾಗದೇ ಗೊಂದಲ ಸೃಷ್ಠಿಸುತ್ತಿದ್ಧಾರೆ ಎಂದು ಹೇಳಿದರು.

ಒಳ ಮೀಸಲು, ಸಭೆ ನಡೆಸಿದ್ದ ಸಿಎಂ

ಪರಿಶಿಷ್ಟ ಜಾತಿಗಳಿಗೆ ಹಂಚಿಕೆ ಮಾಡಿರುವ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.17 ರಿಂದ 18ಕ್ಕೆ ಏರಿಸಿ, ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬುಧವಾರ(ಅ.29) ನಡೆ ಒಳಮೀಸಲು ಕುರಿತ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಮೀಸಲಾತಿ ಹಂಚಿಕೆಯನ್ನು ಶೇ.17ರಿಂದ ಶೇ.18ಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಮೀಸಲಾತಿ ಹೆಚ್ಚಳದ ಮಸೂದೆಯನ್ನು ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿತ್ತು.

ಅಧಿವೇಶನಕ್ಕೂ ಮುನ್ನ ಸುಗ್ರೀವಾಜ್ಞೆ ಮೂಲಕ ಒಳಮೀಸಲು ಜಾರಿಗೆ ತರಬೇಕೆಂಬ ಪ್ರಸ್ತಾವದ ಬಗ್ಗೆಯೂ ಚರ್ಚೆ ನಡೆದಿತ್ತು. ಒಳ ಮೀಸಲಾತಿ ಹಂಚಿಕೆ ನಿರ್ಣಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಎಚ್. ಕೆ.ಪಾಟೀಲ್, ಶಿವರಾಜ ತಂಗಡಗಿ, ಪ್ರಿಯಾಂಕ ಖರ್ಗೆ, ಬಿ. ಆರ್.ತಿಮ್ಮಾಪುರ್ ಅವರು ಕೂಡ ಒಟ್ಟು ಮೀಸಲಾತಿ ಶೇ.18ಕ್ಕೆ ಏರಿಸಿ, ಅಲೆಮಾರಿಗೆ ಶೇ.1 ಮೀಸಲಾತಿ ಕಲ್ಪಿಸುವ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ಒಳಮೀಸಲು ರದ್ದುಪಡಿಸುವ ಉದ್ದೇಶ: ಬಿಜೆಪಿ ಆರೋಪ

ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಆರಂಭಗೊಳ್ಳುವ ಮೊದಲು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಕೇಸುಗಳು ದಾಖಲಾಗಿ ಒಳಮೀಸಲಾತಿ ಆದೇಶ ರದ್ದಾಗಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ದುರುದ್ದೇಶ ಎಂದು ಸಂಸದ ಗೋವಿಂದ ಕಾರಜೋಳ ಇತ್ತೀಚೆಗೆ ಆರೋಪ ಮಾಡಿದ್ದರು.

ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ನಿರಂತರ ಹೋರಾಟ ನಡೆದಿತ್ತು. ಆದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಳಂಬ ನೀತಿ ಮತ್ತು ಗೊಂದಲ ಸೃಷ್ಟಿಸುತ್ತಿದ್ದು, ದೋಷಭರಿತ ಆದೇಶಗಳನ್ನು ನೀಡುವ ಮೂಲಕ ಪರಿಶಿಷ್ಟ ಜನಾಂಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಪ್ರಕರಣ ಬಂದಾಗ ರಾಜ್ಯ ಸರ್ಕಾರದಿಂದ ಯಾರೂ ಹಾಜರಾಗದ ಕಾರಣ ಆದೇಶ ಭಾಗಶಃ ತಡೆಯಾಗಿದೆ ಎಂದು ಆರೋಪಿಸಿದ್ದರು.

ಒಂದು ಜಾತಿಯ ಹಿತ ಕಾಯಲು ದೊಂಬರಾಟ

ಸಿದ್ದರಾಮಯ್ಯನವರು 101 ಜಾತಿಯ ಹಿತ ಕಾಯಲು ಬಯಸುತ್ತಿಲ್ಲ, ಕೇವಲ ಒಂದು ಜಾತಿಯ ಹಿತಕ್ಕಾಗಿ ಈ ದೊಂಬರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ನೇಮಕಾತಿ ಮುಂದೆ ಹೋದಷ್ಟೂ ಸರ್ಕಾರಕ್ಕೆ ಒಳ್ಳೆಯದೆಂಬ ಭಾವನೆ ಇದೆ, ಖಜಾನೆ ಖಾಲಿಯಾಗಿರುವುದರಿಂದ ನೇಮಕಾತಿ ಮಾಡಲೂ ಅವರು ತಯಾರಿಲ್ಲ ಎಂದು ದೂರಿದ್ದರು.

Tags:    

Similar News