ಜಾತಿ ಗಣತಿ ಸಮೀಕ್ಷೆ ಅಂತ್ಯ; 6.13 ಕೋಟಿ ಜನ ಭಾಗಿ, ಆನ್‌ಲೈನ್ ಸಮೀಕ್ಷೆಯಷ್ಟೇ ಬಾಕಿ
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದವರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಲಭ್ಯವಿಲ್ಲದವರು ಸಹ ಸದರಿ ಅವಕಾಶವನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಹಲವು ಗೊಂದಲಗಳು ಹಾಗೂ ವಿರೋಧಗಳ ನಡುವೆ ಆರಂಭವಾದ ಸರ್ಕಾರದ ಮಹತ್ವಾಕಾಂಕ್ಷೆಯ ಹಿಂದುಳಿದ ವರ್ಗಗಳ ಸಾಮಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಕ್ತಾಯವಾಗಿದ್ದು, 6.13 ಕೋಟಿ ಜನಸಂಖ್ಯೆಯ ಮಾಹಿತಿ ಕಲೆ ಹಾಕಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ. ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಪ್ರತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಅಂದಾಜು 6,85,38,000 ಜನಸಂಖ್ಯೆ ಇದ್ದು, ಶುಕ್ರವಾರದ(ಅ.31) ಅಂತ್ಯಕ್ಕೆ 6,13,83,908 ಜನರ ಸಮೀಕ್ಷೆ ಮಾಡಲಾಗಿದೆ. 4,22,254 ಮನೆಗಳು ಸಮೀಕ್ಷೆಯನ್ನು ನಿರಾಕರಿಸಿದ್ದು, 34,49,681 ಮನೆಗಳಲ್ಲಿ ಯಾರೂ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಅವಕಾಶ ನೀಡುವ ಹಿನ್ನೆಲೆಯಲ್ಲಿ Online ಮೂಲಕ https://kscbcselfdeclaration.karnataka.gov.in ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ನ.10ವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದವರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಲಭ್ಯವಿಲ್ಲದವರು ಸಹ ಸದರಿ ಅವಕಾಶವನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಬಹುದಾಗಿದೆ. ಸದರಿ ಸಮೀಕ್ಷೆಯಿಂದ ಸರ್ಕಾರದ ನೀತಿಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವ ಕಾರಣ ಸ್ವಯಂ ದೃಢೀಕರಣದ ಮೂಲಕ ಎಲ್ಲಾ ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅನ್ನು ಸಂಪರ್ಕಿಸಬಹುದಾಗಿದೆ.
ಅನ್‌ಲೈನ್‌ಲ್ಲಿ ಭರ್ತಿ ಮಾಡುವ ವಿಧಾನ
* https://kscbcselfdeclaration.karnataka.gov.in ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಅಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
* ನಾಗರಿಕ ಅಥವಾ ಸಿಟಿಜನ್ ಎಂದು ನಮೂದು ಮಾಡಬೇಕು.
* ಮೊಬೈಲ್ ನಂಬರ್ ನಮೂದಿಸಿ, ಓಟಿಪಿ ಪಡೆಯಬೇಕು
* ಹೊಸ ಸಮೀಕ್ಷೆ ಪ್ರಾರಂಭಿಸಿ ಅಥವಾ ಸ್ಟಾರ್ಟ್ ನ್ಯೂ ಸರ್ವೇ ಬಿಗಿನ್ ಮೇಲೆ ಕ್ಲಿಕ್ ಮಾಡಬೇಕು.
* ಯುಎಚ್‌ಐಡಿ ನಂಬರ್ ನಮೂದಿಸಿ ಮತ್ತು ವೇರಿಫೈ ಮೇಲೆ ಕ್ಲಿಕ್ ಮಾಡಿ ಮಾಹಿತಿ ಭರ್ತಿ ಮಾಡಬೇಕು.
* ಯುಎಚ್‌ಐಡಿ ನಂಬರ್ ಇಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಎಚ್‌ಐಡಿ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ವಿದ್ಯುತ್ ಐಡಿ ನಂಬರ್ ನಮೂದಿಸಬೇಕು.
* ಸಮೀಕ್ಷೆಯಲ್ಲಿ ಭಾಗವಹಿಸುವ ವ್ಯಕ್ತಿಯ ಫೋಟೊ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.
* ರೇಷನ್ ಕಾರ್ಡ್ ಇದ್ದರೆ ಅದರ ನಂಬರ್ ನಮೂದಿಸಿ ಸಬ್‌ಮಿಟ್ ಆರ್‌ಸಿ ಇನ್ಫೋ ಮೇಲೆ ಕ್ಲಿಕ್ ಮಾಡಿ ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.
* ರೇಷನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ನಂಬರ್ ಹಾಕಬೇಕು. ಓಟಿಪಿ ಬಳಸಿ ಮುಂದುವರಿಯಬೇಕು. ಇಲ್ಲವೇ ಫೇಸ್ ಕ್ಯಾಪ್ಚರ್ ಆಗಿದ್ದರೆ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಕ್ಯೂಆರ್ ಕೋಡ್ ಆನ್ ಸ್ಕ್ಯಾನ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಕಿ ನಂತರ ಸ್ಕ್ಯಾನ್ ಕ್ಯುಆರ್ ಮೇಲೆ ಕ್ಲಿಕ್ ಮಾಡಿ ಫೇಸ್ ಕ್ಯಾಪ್ಚರ್ ಅನ್ನು ಪೂರ್ಣಗೊಳಿಸಬೇಕು.
* ಆಧಾರ್ ನಂಬರ್ ಬಳಸಿದ್ದರೆ, ಅದರಲ್ಲಿನ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ. ಪ್ರತಿಯೊಂದಕ್ಕೂ ಓಟಿಪಿ ಬಳಸಬೇಕಾಗುತ್ತದೆ. ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರನ್ನೊಳಗೊಂಡು ಸಮೀಕ್ಷೆಯ ಪ್ರಶ್ನಾವಳಿಗೆ ಮಾಹಿತಿ ನೀಡಿ ಭರ್ತಿ ಮಾಡಬೇಕು
* ಪ್ರಶ್ನಾವಳಿ ಭರ್ತಿ ಮಾಡಿದ ನಂತರ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
* ಸ್ವಯಂ ಘೋಷಣೆ ದಾಖಲೆ ಸಲ್ಲಿಸಬೇಕು. ಇದನ್ನು ಬಿಳಿ ಹಾಳೆಯಲ್ಲಿ'ನಾನು ಈ ಸಮೀಕ್ಷೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದೇನೆ ಮತ್ತು ನೀಡಿರುವ ಎಲ್ಲ ಮಾಹಿತಿಯು ನಿಜ ಮತ್ತು ಸರಿಯಾಗಿದೆ' ಎಂದು ಬರೆದು ಸಹಿ ಮಾಡಬೇಕು. ಇದನ್ನು ಮೊಬೈಲ್‌ನಲ್ಲಿ ಪಡೆದು ಅಪ್‌ಲೋಡ್ ಮಾಡಬೇಕು.
ಅ.31ರವರೆಗೂ ವಿಸ್ತರಣೆಯಾಗಿದ್ದ ಸಮೀಕ್ಷೆ
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಶುಕ್ರವಾರದವರೆಗೆ ವಿಸ್ತರಣೆ ಮಾಡಲಾಗಿತ್ತು. ಸೆ.22 ರಂದು (ಜಿಬಿಎ- ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಪ್ರದೇಶವನ್ನು ಹೊರತುಪಡಿಸಿ) ಪ್ರಾರಂಭವಾದ ಸಮೀಕ್ಷೆಯು ಅ.7 ರಂದು ಕೊನೆಗೊಳ್ಳಬೇಕಾಗಿತ್ತು. ಆದರೆ, ಆ ದಿನಾಂಕವನ್ನು ಸಹ ವಿಸ್ತರಿಸಿ ಅ.19 ರವರೆಗೆ ನೀಡಲಾಗಿತ್ತು. ಸಂಪೂರ್ಣಗೊಳ್ಳದ ಕಾರಣ ಶುಕ್ರವಾರದವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ವಿಸ್ತರಣೆಗೆ ಸರ್ಕಾರ ತೀರ್ಮಾನಿಸಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಮಾಹಿತಿ ನೀಡುವುದಕ್ಕೆ ಮಾತ್ರ ಅವಕಾಶ ಒದಗಿಸಿದೆ.