ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ |ತುಮಕೂರಿನಲ್ಲಿ ರೈತರ ಪ್ರತಿಭಟನೆ ತೀವ್ರ; ಪ್ರತಿಭಟನೆಗೆ ಬಿಜೆಪಿ ಸಾಥ್
ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೇ ಯೋಜನೆ ಜಾರಿಗೊಳಿಸಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ. ಕೂಡಲೇ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.;
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಹೇಮಾವತಿ ಲಿಂಕ್ ಕೆನಾಲ್ ಮೂಲಕ ಮಾಗಡಿ, ರಾಮನಗರಕ್ಕೆ ನೀರು ಕೊಂಡೊಯ್ಯುವ ಪ್ರಸ್ತಾವದಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಸರ್ಕಾರ ಮುಂದಾಲೋಚನೆ ಮಾಡದೇ ಯೋಜನೆ ಜಾರಿಗೊಳಿಸಿರುವುದು ಅವೈಜ್ಞಾನಿಕ. ಕೂಡಲೇ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ಯಲು ಕೆಎಸ್ಆರ್ಟಿಸಿ ಬಸ್ಗಳನ್ನು ಸಿದ್ಧವಿರಿಸಿಲಾಗಿತ್ತು. ಆದರೆ, ಪ್ರತಿಭಟನಾಕಾರರು ಬಸ್ ಚಕ್ರದ ಗಾಳಿಯನ್ನು ತೆಗೆದು ಹಾಕಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದಾಗ ರೊಚ್ಚಿಗೆದ್ದ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಬಸ್ಸನ್ನೇ ಮಗುಚಹಾಕಲು ಪ್ರಯತ್ನಿಸಿದರು. ಬಳಿಕ ಕಾಲ್ನಡಿಗೆಯಲ್ಲೇ ಕಾಮಗಾರಿ ಸ್ಥಳಕ್ಕೆ ತೆರಳುವ ಪ್ರಯತ್ನ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ತುಮಕೂರು ಜಿಲ್ಲೆಯ ಎಲ್ಲ ತಾಲೂಕಿಗೂ ಹೇಮಾವತಿ ನೀರು ಸಿಗಬೇಕು. ರೈತರಿಗೆ ನ್ಯಾಯ ಸಿಗಬೇಕು ಎಂಬುದು ಬಿಜೆಪಿ ಹಾಗೂ ರೈತರ ಬೇಡಿಕೆ. ಆದರೆ, ಪೊಲೀಸರು ರೈತರನ್ನು ಬಂಧಿಸಲು ಮುಂದಾಗುತ್ತಿದೆ. ಹೋರಾಟ ಹತ್ತಿಕ್ಕುವುದು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ವಶಕ್ಕೆ
ಪ್ರತಿಭಟನಾಕಾರರ ಮನವೊಲಿಕೆಗೆ ಪೊಲೀಸರು ಹರಸಾಹಸಪಟ್ಟರು. ಆದರೆ ಮನವೊಲಿಕೆಗೆ ಜಗ್ಗದೆ ಪ್ರತಿಭಟನೆ ನಡೆಸಿದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನೂ ಕೆಲವರು ಕಾಮಗಾರಿ ಸ್ಥಳಕ್ಕೆ ತೆರಳಲು ಯತ್ನಿಸಿದರು. ಮಾರ್ಗಮಧ್ಯೆಯೇ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದರು.
ನಿಷೇಧಾಜ್ಞೆ ಜಾರಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಸಂಕಾಪುರ ಗ್ರಾಮ, ಡಿ.ರಾಂಪುರ ಗ್ರಾಮದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದ 10 ಕಿ.ಮೀ. ವ್ಯಾಪ್ತಿಯಲ್ಲಿ ಮೇ 31ರ ಬೆಳಿಗ್ಗೆ 6 ರಿಂದ ಜೂನ್ 1ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಗುಬ್ಬಿ ತಾಲೂಕು ತಹಶೀಲ್ದಾರ್ ಬಿ.ಆರತಿ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆಯ ನಡುವೆಯೂ ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.
ಸಮಸ್ಯೆ ಬಗೆಹರಿಸಲು ಸಿಎಂ ಸೂಚನೆ
ಹೇಮಾವತಿ ಲಿಂಕ್ ಕೆನಾಲ್ ಕಾಮಕಾರಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೇಮಾವತಿ ನದಿ ಕೆನಾಲ್ ಯೋಜನೆಯಲ್ಲಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರಿಗೆ ಸೂಚನೆ ನೀಡಿದ್ದೇನೆ. ಯಾರೂ ಕೂಡ ಹೇಮಾವತಿ ನದಿ ಕೆನಾಲ್ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಯೋಜನೆ ಕುರಿತು ಮನವರಿಕೆ
ತುಮಕೂರಿನಲ್ಲಿ ನಡೆಯುತ್ತಿರುವ ಹೋರಾಟ ವಿಚಾರ ಆ ಭಾಗದ ಎಲ್ಲಾ ಶಾಸಕರಿಗೂ ಗೊತ್ತಿದೆ. ಶಾಸಕರಾದ ಕೃಷ್ಣಪ್ಪ ಮತ್ತು ಸುರೇಶ್ ಗೌಡ ಜೊತೆ ಮಾತಾಡಿದ್ದೇವೆ. ಯೋಜನೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಹೋರಾಟ ಮಾಡುವುದು ತಪ್ಪು ಎಂದು ಹೇಳಲ್ಲ. ಎಲ್ಲರೂ ನಮ್ಮವರೇ, ಅಲ್ಲಿ ಇರುವ ರೈತರು ನಮ್ಮವರೇ. ಎಲ್ಲರ ಹಿತವನ್ನೂ ನಾವು ಕಾಪಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ರಾಜಕೀಯ ದುರುದ್ದೇಶದಿಂದ ವಿರೋಧ
ತಾಂತ್ರಿಕ ಸಮಿತಿ ನೀಡಿದ ವರದಿ ಆಧರಿಸಿ ತುಮಕೂರಿನಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರಿನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆಲಸ ಶುರುವಾದ ಬಳಿಕ ಬಿಜೆಪಿಯವರು ವಿರೋಧ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸಂಸದರು, ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ತಾಂತ್ರಿಕ ವರದಿ ಕುರಿತು ಚರ್ಚಿಸಲಾಯಿತು. ವರದಿಯಲ್ಲಿ ಕಾಮಗಾರಿಗೆ ಅನುಮತಿ ನೀಡಲಾಗಿತ್ತು. ಒಂದು ವೇಳೆ ಅನುಮತಿ ನೀಡದೇ ಹೋಗಿದ್ದರೆ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸುತ್ತಿರಲಿಲ್ಲ. ಈಗ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.