ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆ ವಿರೋಧಿಸಿ ಹೋರಾಟ, ಪ್ರಸ್ತಾವನೆ ಕೈಬಿಡಲು ಸರ್ಕಾರಕ್ಕೆ ಗಡುವು

ಈಗಾಗಲೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಫಲಾನುಭವಿಗಳಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಅದೇಶ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

Update: 2025-09-25 09:29 GMT

ನಗರದ ವಾಲ್ಮೀಕಿ ವೃತದಲ್ಲಿ ಸೇರಿದ್ದ ಹೋರಾಟಗಾರರು.

Click the Play button to listen to article

ರಾಜ್ಯದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ಹಾಗೂ ಚರ್ಚೆಗಳು ಜೋರಾಗಿ ನಡೆಯುತ್ತಿವೆ.  ಆದರೆ, ಇದರ ವಿರುದ್ಧವಾಗಿ ಹೊಸಪೇಟೆಯಲ್ಲಿ ಎಸ್‌ಟಿ ಸಮುದಾಯದ ನಾಯಕರು ಹೋರಾಟಕ್ಕೆ ಇಳಿದಿದ್ದು, ಪ್ರಸ್ತಾವವನ್ನು 10 ದಿನಗಳೊಳಗೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. 

ಗುರುವಾರ ನಗರದ ವಾಲ್ಮೀಕಿ ವೃತ್ತದಿಂದ ಸಾವಿರಾರು ಹೋರಾಟಗಾರರು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕುರುಬ ಸಮುದಾಯವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು ಎಂದು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.

ಎಸ್‌ಟಿ ಸಮುದಾಯದ ಬೇಡಿಕೆ ಏನು ?

ಪರಿಶಿಷ್ಟ ಪಂಗಡಕ್ಕೆ ಕುರುಬ ಮತ್ತು ಇತರೆ ಸಮುದಾಯಗಳನ್ನು ಸೇರ್ಪಡೆ ಮಾಡುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಫಲಾನುಭವಿಗಳಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಅದೇಶ ನೀಡಬೇಕು' ಎಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ ಎಂದು ತಾಲೂಕು ವಾಲ್ಮೀಕಿ ಸಮುದಾಯದ ಅಧ್ಯಕ್ಷ ಗೋಸಲ ಭರಮಪ್ಪ ತಿಳಿಸಿದ್ದಾರೆ.

ಏನಿದು ಎಸ್‌ಟಿ ಸೇರ್ಪಡೆ ವಿವಾದ?

ಬಹು ವರ್ಷದ ಬೇಡಿಕೆಯಾಗಿರುವ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಚರ್ಚೆಗಳು ಜೋರಾಗಿದ್ದು ಈಗ ವಿವಾದದ ರೂಪ ಪಡೆದಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು.

ಅಂದಿನ ಸಭೆಯ ಸೂಚನಾ ಪತ್ರದಲ್ಲಿ ಎರಡು ಅಜೆಂಡಾಗಳನ್ನು ಉಲ್ಲೇಖಿಸಲಾಗಿತ್ತು. ಮೊದಲನೆಯದ್ದಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದು,  ಎರಡನೆಯದ್ದು ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ರಾಜ್ಯದ ಗೊಂಡ ಸಮುದಾಯದ ಜತೆ ಸಾಮ್ಯತೆ ಹೊಂದಿರುವ ಬಗ್ಗೆ ಚರ್ಚೆಯಾಗಿತ್ತು. ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಮೀಸಲಾತಿಯಲ್ಲಿ ಕುರುಬ ಸಮುದಾಯ  

ಪ್ರಸ್ತುತ ರಾಜ್ಯದಲ್ಲಿ ಕುರುಬ ಸಮುದಾಯವು ʼ2ಎʼ ಗ್ರೂಪ್ ನಲ್ಲಿದ್ದು, ಶೇ.15 ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಆದರೆ, 2ಎ ಗುಂಪಿನಲ್ಲಿ ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ, ಬೌದ್ಧ ಸೇರಿದಂತೆ 100 ಕ್ಕೂ ಹೆಚ್ಚು ಸಮುದಾಯಗಳಿವೆ. ಹಾಗಾಗಿ ಮೀಸಲಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವುದಿಲ್ಲ ಎಂಬ ಬೇಸರ ಕುರುಬ ಸಮುದಾಯದಲ್ಲಿದೆ. ಇನ್ನು ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿ ಶೇ.7 ರಷ್ಟು ಮೀಸಲಾತಿ ಸೌಲಭ್ಯ ನೀಡಲಾಗಿದೆ. ವಾಲ್ಮೀಕಿ, ನಾಯಕ ಸಮುದಾಯ ಸೇರಿದಂತೆ 51 ಸಮುದಾಯಗಳು ಎಸ್‌ಟಿ ಮೀಸಲಾತಿಯ ಲಾಭ ಹಾಗೂ ಸೌಲಭ್ಯವನ್ನು ಪಡೆಯುತ್ತಿವೆ. ಒಂದು ವೇಳೆ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿದರೆ, ಈಗಿನ ಶೇ.7 ರ ಮೀಸಲಾತಿಯಲ್ಲಿ ಕುರುಬ ಸಮುದಾಯವೂ ಪಾಲು ಪಡೆಯಬೇಕಾಗುತ್ತದೆ.  

ಮೀಸಲಾತಿ ಹೆಚ್ಚಳಕ್ಕೆ ಹೋರಾಡಿದ್ದ ಎಸ್‌ಟಿ ಸಮುದಾಯ

ಈ ಮೊದಲು ರಾಜ್ಯದಲ್ಲಿ ಎಸ್‌ಟಿ ಮೀಸಲಾತಿಯ ಪ್ರಮಾಣ ಶೇ.4 ರಷ್ಟಿತ್ತು. ಮೀಸಲಾತಿ ಹೆಚ್ಚಿಸುವಂತೆ ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಶೇ 7ಕ್ಕೆ ಹೆಚ್ಚಿಸಿತ್ತು. ಇದರಿಂದ ಎಸ್‌ಟಿ ವಾಲ್ಮೀಕಿ, ನಾಯಕ ಸಮುದಾಯ ನೆಮ್ಮದಿಯಾಗಿತ್ತು. ಈಗ  ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಿದರೆ ಮೀಸಲಾತಿ ಕಡಿಮೆಯಾಗುವ ಆತಂಕ ಎದುರಾಗಿದೆ.   

ಮೀಸಲಾತಿಗೆ ಕೆ.ಎಸ್‌.ಈಶ್ವರಪ್ಪ ಪ್ರಯತ್ನ

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಬಿಜೆಪಿ ಮುಖಂಡ ಹಾಗೂ ಕುರುಬ ಸಮುದಾಯದ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಂಘಟನೆಗಳು ಮತ್ತು ಮಠಗಳು ರಾಜ್ಯಾದ್ಯಂತ ಸಮಾವೇಶ ನಡೆಸಿ ಕುರುಬ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದವು. ಆಗಿನ ಸರ್ಕಾರವೂ ಪರಿಶೀಲನೆ ನಡೆಸುವ ಭರವಸೆ ನೀಡಿತ್ತು. ಆ ಮೂಲಕ ಕುರುಬ ಸಮುದಾಯದ ಜನರಿಗೆ ಉದ್ಯೋಗ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಮೀಸಲಾತಿ ಒದಗಿಸುವ ಸಂಬಂಧ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ಹೆಚ್ಚು ಬೇಡಿಕೆ ಬಂದಿತ್ತು.

Tags:    

Similar News