ಪ್ರಜ್ವಲ್ ರೇವಣ್ಣ ಬಂಧನ; ಜರ್ಮನಿಯಿಂದ ವಾಪಸಾದ ತಕ್ಷಣ ವಶಕ್ಕೆ ಪಡೆದ ಎಸ್‌ಐಟಿ
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಆಮಾಯಕ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಮಹಿಳೆಯ ಮಾನಹಾನಿ, ಬೆದರಿಕೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ ೨೬ ಮಧ್ಯರಾತ್ರಿ ಬಳಿಕ ಬೆಂಗಳೂರು ವಿಮಾನ ನಿಲ್ದಾಣದಿಂದ ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ಷೆಂಗೆನ್ ವೀಸಾ ಬಳಸಿ ಪರಾರಿಯಾಗಿದ್ದರು.;
ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಬಂಧನ ಭೀತಿಯಿಂದ ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ತಿಂಗಳು ಕಳೆದ ಬಳಿಕ ಗುರವಾರ ಮಧ್ಯರಾತ್ರಿ ವೇಳೆ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿಳಿದ ತಕ್ಷಣ ಎಸ್‌ಐಟಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. 34 ದಿನಗಳ ಬಳಿಕ ಅಂದರೆ ಮೇ 31 ಬೆಳಗಿನ ಜಾವ 1.15 ಗಂಟೆ ಸುಮಾರಿಗೆ ಮಹತ್ವದ ಬೆಳವಣಿಗೆಯಾಗಿದ್ದು, ಇಮಿಗ್ರೇಷನ್ ಅಧಿಕಾರಿಗಳ ಸಹಾಯದೊಂದಿಗೆ ಎಸ್‌ಐಟಿ ಪೊಲೀಸರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮನ
ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ಏರ್‌ಲೈನ್ಸ್‌ನ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಕಾಯ್ದಿರಿಸಿದ್ದ ಪ್ರಜ್ವಲ್ ಗುರುವಾರ ಮಧ್ಯಾಹ್ನ 4.30ಕ್ಕೆ ಮ್ಯೂನಿಚ್‌ನಿಂದ ಹೊರಟು ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಮೊದಲು ವಲಸೆ ವಿಭಾಗದ (ಇಮಿಗ್ರೇಷನ್) ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡು ನಂತರ ಎಸ್‌ಐಟಿಗೆ ಒಪ್ಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ನೀಡಿರುವುದರಿಂದ ಅವರನ್ನು ಬಂಧಿಸಲು ವಿಶೇಷ ತನಿಖಾ ದಳ-ಎಸ್‌ಐಟಿ ಬಂಧಿಸಲು ಸಿದ್ಧತೆ ಮಾಡಿಕೊಂಡಿತ್ತು. ಪ್ರಜ್ವಲ್ ವಶಕ್ಕೆ ಪಡೆದ ಪೊಲೀಸರು ಪಾಸ್‌ಪೋರ್ಟ್ ಮತ್ತು ವೀಸಾ ವಶಕ್ಕೆ ಪಡೆದು ಬೌರಿಂಗ್ ಅಥವಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಿದ್ದಾರೆ.
ಹಾಸನ ವಿಡಿಯೋ ಪ್ರಕರಣ ಸಂಬಂಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಅವರು 7 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಎಸ್‌ಐಟಿ ಈ ಮನವಿಯನ್ನು ತಿರಸ್ಕರಿಸಿತ್ತು. ಜೊತೆಗೆ ಪ್ರಜ್ವಲ್ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಕೂಡಾ ಜಾರಿ ಮಾಡಿದ್ದರು.
ಬಳಿಕ ಇಂಟರ್‌ಪೋಲ್ ಮೂಲಕ ಬ್ಲೂಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿತ್ತು. ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ವಜಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಕೇಂದ್ರಕ್ಕೆ ಪತ್ರಬರೆದಿದ್ದರು. ಇತ್ತೀಚೆಗೆ ಎಸ್‌ಐಟಿ ನ್ಯಾಯಾಲಯದ ಅನುಮತಿ ಪಡೆದು ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ವಜಾಗೊಳಿಸಲು ಕೆಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿತ್ತು. ಬಳಿಕ ಕೇಂದ್ರ ಸರ್ಕಾರ ಪ್ರಜ್ವಲ್ ಪಾಸ್‌ಪೋರ್ಟ್ ವಜಾಮಾಡುವ ಬಗ್ಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿತ್ತು.
ಪ್ರಕರಣ
ಈವರೆಗೆ ಒಟ್ಟು ನಾಲ್ಕು ದೂರುಗಳು ದಾಖಲಾಗಿದ್ದು, ನೂರಾರು ಮಹಿಳೆಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಟ್ಟುಕೊಂಡಿರುವ ಗಂಭೀರ ಆರೋಪ ಪ್ರಜ್ವಲ್ ಮೇಲಿದೆ. ಗನ್ ತೋರಿಸಿ, ಅತ್ಯಾಚಾರ ಎಸಗಿ, ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ, ಅದನ್ನೇ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಪ್ರಜ್ವಲ್ ವಿರುದ್ಧ ಎಸ್ ಐಟಿಯಲ್ಲಿ ದೂರು ದಾಖಲಿಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರ ಕಾವೇರಿದ ವೇಳೆ ಪ್ರಜ್ವಲ್ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಗಳು ಪ್ರಜ್ವಲ್ ಅಭ್ಯರ್ಥಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಹರಿದಾಡಿದ್ದವು. ಆ ಬಳಿಕ ಈ ಲೈಂಗಿಕ ಹಗರಣ ಹಾಸನವಷ್ಟೇ ಅಲ್ಲದೆ ರಾಜ್ಯದಾದ್ಯಂತ ಭಾರೀ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ಆದರೆ, ಕಳೆದ ಏ.28 ರಂದು ಪ್ರಜ್ವಲ್ ವಿರುದ್ಧ ಮೊದಲ ಪ್ರಕರಣ ಹೊಳೆನರಸೀಪುರದಲ್ಲಿ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿ ತನಿಖೆಗೆ ಚಾಲನೆ ನೀಡಿತ್ತು. ಆದರೆ, ಹಾಸನ ಲೋಕಸಭಾ ಚುನಾವಣೆಯ ಮತದಾನ ಮುಗಿದ ಮಾರನೇ ದಿನ ಏ.27ರ ಬೆಳಗಿನ ಜಾವವೇ ಪ್ರಜ್ವಲ್ ದೇಶ ತೊರೆದು ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿದ್ದರು.