ಪೋಕ್ಸೊ ಪ್ರಕರಣ | ಮುರುಘಾ ಶ್ರೀ ಜಾಮೀನು ರದ್ದು; ವಾರದಲ್ಲಿ ಹಾಜರಾಗಲು ಸುಪ್ರೀಂಕೋರ್ಟ್ ಆದೇಶ
ಸಾಕ್ಷಿಗಳ ವಿಚಾರಣೆ ಪೂರ್ತಿಯಾಗುವವರೆಗೆ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.;
ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಮಂಜೂರಾದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಡಿ. ರಾಜಪ್ಪ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ʼಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೂ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನದಲ್ಲಿರಬೇಕು. ಪ್ರಾಸಿಕ್ಯೂಷನ್ ಹಾಗೂ ಆರೋಪಿ ಎಲ್ಲಾ ವಿಚಾರಣೆಗಳಿಗೂ ಸಹಕರಿಸಬೇಕುʼ ಎಂದು ಹೇಳಿದೆ.
ನಾಲ್ಕು ತಿಂಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಚಿತ್ರದುರ್ಗ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದು, ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಬೇಕಿದ್ದರೆ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಹೇಳಿದೆ.
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಹಲವು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ದೂರು ನೀಡಿದ್ದರು.
ʼಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಬಳಿ ಹೋದ ಬಳಿಕ ನಮಗೆ ಅಮಲು ಬರುವಂತೆ ಮಾಡಿ ದೌರ್ಜನ್ಯ ಎಸಗಲಾಗುತ್ತಿತ್ತು ಎಂದು ಸಂತ್ರಸ್ತ ಬಾಲಕಿಯರು ಆರೋಪಿಸಿದ್ದರು.
ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ನಂತರ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಫೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು.