Murugha Shree Pocso Case | ಸಾಕ್ಷಿ ವಿಚಾರಣೆ ಪೂರ್ಣ: ಶಿವಮೂರ್ತಿ ಸ್ವಾಮಿ ಬಿಡುಗಡೆಗೆ ಕೋರ್ಟ್ ಆದೇಶ
ಸಂತ್ರಸ್ತೆಯರಿಬ್ಬರು ಸೇರಿ 12 ಜನ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಶಿವಮೂರ್ತಿ ಸ್ವಾಮಿ ಇರುವಂತಿಲ್ಲ ಎಂದು ಕೋರ್ಟ್ ಹೇಳಿದೆ.;
ಅಪ್ರಾಪ್ತ ಬಾಲಕಿಯರ ಮೇಲೆ ಸರಣಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಸ್ವಾಮಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಿವಮೂರ್ತಿ ಸ್ವಾಮಿಗೆ ಕೋರ್ಟ್ ಜಾಮೀನು ನೀಡಿದೆ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಶಿವಮೂರ್ತಿ ಸ್ವಾಮಿಗೆ ಈ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆರೋಪಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ರದ್ದುಗೊಳಿಸಬೇಕೆಂದು ಮನವಿ ಮಾಡಲಾಗಿತ್ತು.
ಈ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೇ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವವರೆಗೆ ಸ್ವಾಮಿಯನ್ನು ಬಂಧನದಲ್ಲಿಡುವಂತೆ ಆದೇಶಿಸಿತ್ತು. ಇದೀಗ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಸೋಮವಾರದಂದೇ ಬಿಡುಗಡೆಗೆ ಆದೇಶ ಹೊರಡಿಸಿದೆ.
ಸಂತ್ರಸ್ತೆಯರಿಬ್ಬರು ಸೇರಿ 12 ಜನ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಶಿವಮೂರ್ತಿ ಸ್ವಾಮೀಜಿ ಇರುವಂತಿಲ್ಲ. ಹಾಗಾಗಿ ಕೋರ್ಟ್‌ನಿಂದ ಜಿಲ್ಲಾ ಕಾರಾಗೃಹಕ್ಕೆ ತೆರಳಿ ಬಳಿಕ ಶಿವಮೂರ್ತಿ ಸ್ವಾಮಿ ಬಿಡುಗಡೆಯಾಗಿ ದಾವಣಗೆರೆಗೆ ತೆರಳುವ ಸಾಧ್ಯತೆಯಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ-1860 ರ ಕಲಂ 376 (2) (ಎನ್), 376 (3), 504 ಮತ್ತು ಪೋಕ್ಸೊ ಕಾಯಿದೆ 2012ರ ಕಲಂ 5 (ಎಲ್) ಮತ್ತು 6ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.