ಸೂಕ್ತ ತನಿಖೆ ಕೋರಿ ಧರ್ಮಸ್ಥಳದ ಮೃತ ಯುವತಿ ಪೋಷಕರಿಂದ ಪಂಜಾಬ್‌ ಸಿಎಂಗೆ ಪತ್ರ

ಕಾಲೇಜು ಆಡಳಿತ ಮಂಡಳಿ ನೀಡಿದ ಮಾಹಿತಿಯಂತೆ ಎಫ್‌ಐಆರ್‌ ದಾಖಲಿಸಲು ಬಿಡುವುದಿಲ್ಲ. ಆಡಳಿತ ಮಂಡಳಿ ಹಾಗೂ ಪ್ರೊಫೆಸರ್‌ ವಿರುದ್ದ ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದು ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.;

Update: 2025-05-19 15:07 GMT

ಮೃತ ಯುವತಿ ಆಕಾಂಕ್ಷ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌

ಧರ್ಮಸ್ಥಳದ ಯುವತಿ ಆಕಾಂಕ್ಷ ಪಂಜಾಬ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಯುವತಿ ಪೋಷಕರು, ಎಲ್‌ಪಿಸಿ ಕ್ಯಾಂಪಸ್‌ನಲ್ಲಿ ಹಿಂದೆಯೂ ಈ ರೀತಿಯಾದ ಹಲವು ಅಸಹಜ ಸಾವುಗಳು ಸಂಭವಿಸಿವೆ. ಕಾಲೇಜಿನ ಕೈವಾಡ ಕಂಡುಬಂದಿದ್ದು ಸರಿಯಾದ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಆದ್ದರಿಂದ ಮದ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸುವಂತೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ಪತ್ರ ಬರೆದಿದ್ದಾರೆ.

ಎಫ್‌ಐಆರ್‌ ದಾಖಲಾಗದೆ ಇನ್ನು ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಕಾಲೇಜು ಆಡಳಿತ ಮಂಡಳಿ ನೀಡಿದ ಮಾಹಿತಿಯಂತೆ ಎಫ್‌ಐಆರ್‌ ದಾಖಲಿಸಲು ನಾವು ಬಿಡುವುದಿಲ್ಲ. ಆಡಳಿತ ಮಂಡಳಿ ಹಾಗೂ ಪ್ರೊಫೆಸರ್‌ ವಿರುದ್ದ ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದು ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. 

ಧರ್ಮಸ್ಥಳ ಮೂಲದ ವಿದ್ಯಾರ್ಥಿನಿ ಆಕಾಂಕ್ಷ ಸಾವಿನ ಕುರಿತು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು,  ಪಂಜಾಬ್‌ನಲ್ಲಿ ವಿದ್ಯಾರ್ಥಿನಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಉಪನ್ಯಾಸಕ ಮ್ಯಾಥ್ಯೂ ಅವರ ಕಿರುಕುಳದಿಂದ ಆಕಾಂಕ್ಷ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಆಕಾಂಕ್ಷ ನಿಗೂಢ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ನಾನು ರಾಜ್ಯ ಮುಖ್ಯಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದು, ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕಾಂಕ್ಷ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ. ಅಲ್ಲದೇ ಆಕಾಂಕ್ಷ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ಮುಖ್ಯಕಾರ್ಯದರ್ಶಿ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಚರ್ಚೆ ನಡೆಸಿದ್ದು, ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಾಂಕ್ಷ ಅವರ ಕುಟುಂಬದ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಲ್ಲಲಿದ್ದು, ಸರ್ಕಾರದಿಂದ ಅಗತ್ಯ ಸಹಕಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಆಕಾಂಕ್ಷ ಪಂಜಾಬ್‌ನ ಪಗ್ವಾರದಲ್ಲಿರುವ ಲವ್ಲಿ ಪ್ರೊಫೆಷನಲ್‌ ಕಾಲೇಜಿನಲ್ಲಿ ಏರೋನಾಟಿಕ್‌ ಇಂಜಿನಿಯರಿಂಗ್‌ ಮುಗಿಸಿದ್ದರು. ಆರು ತಿಂಗಳಿನಿಂದ ದೆಹಲಿಯ ಸ್ಪೈಸ್‌ ಏರೋಸ್ಪೇಸ್‌ನಲ್ಲಿ ಕೆಲಸ ಮಾಡುತ್ತಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋಗಲು ಸಿದ್ದರಾಗಿದ್ದರು. ಆದರೆ ಪ್ರಮಾಣಪತ್ರ ಪಡೆಯಲು ಕಾಲೇಜಿಗೆ ಹೋಗಿದ್ದ ಆಕಾಂಕ್ಷ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದರು. 

Tags:    

Similar News