ಪಾಕ್‌ ಪರ ಘೋಷಣೆ: ನಾಸೀರ್ ಹುಸೇನ್‌ಗೆ ಪ್ರಮಾಣವಚನ ಬೋಧಿಸದಂತೆ ಉಪರಾಷ್ಟ್ರಪತಿಗೆ ಪತ್ರ

Update: 2024-03-07 06:40 GMT

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಸೀರ್ ಹುಸೇನ್ ಅವರು ಆಯ್ಕೆಯಾದ ಬಳಿಕ, ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾರೆ. ಹಾಗಾಗಿ ಅವರಿಗೆ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪಾಕಿಸ್ತಾನ್‌ ಪರ ಘೋಷಣೆ ಕೂಗಿರುವುದು ಎಫ್ಎಸ್ಎಲ್ ವರದಿಯಲ್ಲೂ ಸಹ ದೃಢಪಟ್ಟಿದ್ದು, ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣವಚನ ಬೋಧಿಸಬಾರದು ಎಂದು ಪತ್ರ ಬರೆಯಲಾಗಿದೆ.

ಇತ್ತೀಚೆಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, 'ಪಾಕಿಸ್ತಾನ ಜಿಂದಾಬಾದ್” ಎಂದು ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭೆ ಸದಸ್ಯರಾದ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಆರೋಪಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು.

ʼʼಪಾಕಿಸ್ತಾನದ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣ ಪೂರ್ಣಗೊಳ್ಳದ ಹೊರತು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ ಸಯ್ಯದ್ ನಾಸೀರ್ ಹುಸ್ಸೇನ್ ಪ್ರಮಾಣ ವಚನ ಸ್ವೀಕರಿಸಬಾರದುʼʼ ಎಂದು ವಿಜಯೇಂದ್ರ ಹೇಳಿದ್ದರು.

ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರದ ಸಮಗ್ರತೆ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹುಸ್ಸೇನ್ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದು ಅವರು ಕಿಡಿಕಾರಿದ್ದರು.

Tags:    

Similar News