ತಾಂತ್ರಿಕ ಅನ್ವೇಷಣೆಯಲ್ಲಿ ರಾಜ್ಯ ಮುಂಚೂಣಿ: ಸಿಎಂ ಸಿದ್ದರಾಮಯ್ಯ

Update: 2024-08-02 07:39 GMT

ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿ ಕಲ್ಪಿಸುವ ಕಾರ್ಯಕ್ಕಾಗಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದೇಶದ ಪ್ರತಿಷ್ಠಿತ ಮತ್ತು ಅತಿದೊಡ್ಡ ನ್ಯಾನೋ ಸಮ್ಮೇಳನವಾದ ʻಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನʼವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, "ದೇಶ, ವಿದೇಶಗಳ ಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು, ತಾಂತ್ರಿಕ ಚಿಂತಕರು, ಉದ್ಯಮಗಳ ಖ್ಯಾತನಾಮರೊಂದಿಗೆ ಈ ಪ್ರತಿಷ್ಠಿತ ನ್ಯಾನೋ ಟೆಕ್ನಾಲಜಿ ಸಮಾವೇಶದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಎನಿಸುತ್ತಿದೆ. ಈ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್.‌ ರಾವ್‌ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುವ ಇಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾವೇಶದಲ್ಲಿ ಭಾಗವಹಿಸುವುದು ನನಗೆ ಯಾವತ್ತೂ ಸ್ಪೂರ್ತಿದಾಯಕ ಹಾಗೂ ಸಂತಸದ ವಿಚಾರ ಎಂದು ಹೇಳಿದರು.

“ಐಐಎಸ್ಸಿ, ಜೆಎನ್‌ಸಿಎಎಸ್‌ಆರ್‌, ಎನ್‌ಸಿಬಿಎಸ್‌, ಸಿಇಎನ್‌ಎಸ್ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ದೇಶದ ನ್ಯಾನೋ ಟೆಕ್‌ ಹಬ್‌ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ನನಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಈ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ” ಎಂದು ಹೇಳಿದರು.

“ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ಮೆಡಿಸಿನ್‌, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳಿಗೆ ವಿನೂತನ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಇವುಗಳಿಗೆ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಸಂಶೋಧಿಸಲು ನಾನು ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್‌ಗಳನ್ನು ಕೇಳಿಕೊಳ್ಳುತ್ತೇನೆ” ಎಂದರು.

Tags:    

Similar News