ಚಾಮುಂಡಿ, ನಂದಿ ಬೆಟ್ಟಗಳ ರೋಪ್‌ವೇಗೆ ವಿರೋಧ: ಪರಿಸರಕ್ಕೆ ಹಾನಿ; ಜಾಗತಿಕ ಸಂಘಟನೆಗಳಿಂದ ಎಚ್ಚರಿಕೆ
ಅಮೆರಿಕದ ಗೀವ್ ಲೈಫ್ ಫೌಂಡೇಷನ್‌ನ ಅಧ್ಯಕ್ಷ ಹಾಗೂ ಎರಡು ಬಾರಿ ನೊಬೆಲ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಖ್ಯಾತ ವಕೀಲ ಡಾ. ಬರಟ್ ಎಸ್. ಪಿಶರ್ ಕಾನೂನಾತ್ಮಕವಾಗಿ ಎಲ್ಲಾ ನೆರವು ನೀಡುತ್ತೇವೆ, ಎಂದು ಭರವಸೆ ನೀಡಿದ್ದಾರೆ. ಎಚ್2 ಚಳವಳಿಯ ನಾಯಕಿ ಡಾ. ಸಂಜನಾ ಜಾನ್ , ಜಲಮೂಲಗಳು ಶಾಶ್ವತವಾಗಿ ನಾಶವಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.;
ಜೀವವೈವಿಧ್ಯತೆಯ ತಾಣಗಳಾದ ಚಾಮುಂಡಿ ಬೆಟ್ಟ ಮತ್ತು ನಂದಿ ಗಿರಿಧಾಮಗಳಲ್ಲಿ ರೋಪ್‌ವೇ ನಿರ್ಮಾಣದ ಯೋಜನೆಯು ಪರಿಸರಕ್ಕೆ ಗಂಭೀರ ಅಪಾಯ ತರುತ್ತದೆ ಎಂದು ಪ್ರಸಿದ್ಧ ಪರಿಸರ ತಜ್ಞ ಡಾ. ಎ.ಎನ್. ಎಲ್ಲಪ್ಪ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಮಾನವ ಹಕ್ಕುಗಳ ಪ್ರತಿಷ್ಠಾನದಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಅವರು ಬೊಟ್ಟು ಮಾಡಿ ತೋರಿಸಿದ ಅವರು, ಯೋಜನೆಗಳನ್ನು ಕೈಗೊಳ್ಳುವ ಮೊದಲು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ದೇಶ-ವಿದೇಶಗಳ ಗಣ್ಯರು ನಂದಿ ಬೆಟ್ಟ ರಕ್ಷಿಸುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಎಲ್ಲಪ್ಪ ರೆಡ್ಡಿ ಕಳವಳ
''ಚಾಮುಂಡಿ ಮತ್ತು ನಂದಿ ಬೆಟ್ಟಗಳು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಾಗಿವೆ. ಈ ಎರಡೂ ಬೆಟ್ಟಗಳು ಈಗಾಗಲೇ ಲಕ್ಷಾಂತರ ಜನರ ಭೇಟಿಯಿಂದ ತಮ್ಮ ಧಾರಣಾ ಶಕ್ತಿ ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ರೋಪ್‌ವೇ ನಿರ್ಮಾಣವು ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ. ಈ ಯೋಜನೆಯನ್ನು ಜಾರಿಗೆ ತರುವ ಮೊದಲು ಭೂವಿಜ್ಞಾನ ಮತ್ತು ಪರಿಸರದ ಮೇಲಿನ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು," ಎಂದು ಯಲ್ಲಪ್ಪ ರೆಡ್ಡಿ ಒತ್ತಾಯಿಸಿದರು.
"ಕೋಲಾರ ಮತ್ತು ಹೈದರಾಬಾದ್‌ನಲ್ಲಿ ಇದಕ್ಕಾಗಿ ಮೀಸಲಾದ ಭೂ ಭೌಗೋಳಿಕ ಅಧ್ಯಯನ ಸಂಸ್ಥೆಗಳು ಇರುವುದರಿಂದ, ಅವುಗಳ ಸಹಾಯದಿಂದ ಈ ಬೆಟ್ಟಗಳ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು,'' ಎಂದು ಅವರು ಸಲಹೆ ನೀಡಿದರು.
'ರೋಪ್‌ವೇ ನಿರ್ಮಾಣಕ್ಕಾಗಿ ಸುಮಾರು 150 ಅಡಿ ಆಳಕ್ಕೆ ಬಂಡೆಗಳನ್ನು ಕೊರೆಯುವ ಅಗತ್ಯವಿದ್ದು, ಇದರಿಂದ ಬೆಟ್ಟಗಳಲ್ಲಿ ಬಿರುಕುಗಳು ಉಂಟಾಗುವ ಸಾಧ್ಯತೆ ಇದೆ. ಇದು ಪರಿಸರಕ್ಕೆ ದೊಡ್ಡ ಆಘಾತವನ್ನುಂಟು ಮಾಡಲಿದೆ. ರಾಜ್ಯ ಸರ್ಕಾರ ಪರಿಸರ ಸಂರಕ್ಷಣೆಗೆ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಪ್ರವಾಸೋದ್ಯಮದ ನೆಪದಲ್ಲಿ ಕೆಲವರಿಗೆ ಅನುಕೂಲ ಮಾಡಿಕೊಡುವ ಯತ್ನ ನಡೆಯುತ್ತಿದೆ," ಎಂದು ಅವರು ಆರೋಪಿಸಿದರು.
ರಾಜಕೀಯ ಜವಾಬ್ದಾರಿಯ ಕೊರತೆ
ಡಾ. ರೆಡ್ಡಿ ರಾಜಕೀಯ ನಾಯಕರ ಮೇಲೆ ತೀವ್ರ ಟೀಕೆ ಮಾಡಿದರು. "ವಿಧಾನಮಂಡಲ ಅಧಿವೇಶನದಲ್ಲಿ ನಂದಿ ಬೆಟ್ಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆದರೆ ಹನಿಟ್ರ್ಯಾಪ್‌ನಂತಹ ವಿಷಯಗಳ ಬಗ್ಗೆ ಶಾಸಕರು ಮತ್ತು ಸಚಿವರು ಉತ್ಸಾಹದಿಂದ ಮಾತನಾಡಿದ್ದಾರೆ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲದಿರುವುದು ಖೇದಕರ," ಎಂದು ಅವರು ಹೇಳಿದರು.
''ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಈ ಬೆಟ್ಟಗಳನ್ನು ಉಳಿಸುವುದು ಸಾಧ್ಯವಿಲ್ಲ ಎಂದು ಆರೋಪಿಸಿದ ಅವರು, ಜನರೇ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶ-ವಿದೇಶಗಳಿಂದ ಬೆಂಬಲ
ಸುದ್ದಿಗೋಷ್ಠಿಯಲ್ಲಿ ಅಮೆರಿಕದ ಗೀವ್ ಲೈಫ್ ಫೌಂಡೇಷನ್‌ನ ಅಧ್ಯಕ್ಷ ಹಾಗೂ ಎರಡು ಬಾರಿ ನೊಬೆಲ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಖ್ಯಾತ ವಕೀಲ ಡಾ. ಬರಟ್ ಎಸ್. ಪಿಶರ್ ಭಾಗವಹಿಸಿ ಮಾತನಾಡಿದರು. "ನಂದಿ ಬೆಟ್ಟ ಶ್ರೀಮಂತ ಜಲಮೂಲಗಳನ್ನು ಹೊಂದಿದೆ. ಇದನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಈ ಉದ್ದೇಶಕ್ಕಾಗಿ ವಾಷಿಂಗ್ಟನ್ ಡಿಸಿಯಿಂದ ಆಗಮಿಸಿದ್ದೇನೆ. ನಂದಿ ಬೆಟ್ಟವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಮಾಡಲು ಕಾನೂನಾತ್ಮಕವಾಗಿ ಎಲ್ಲಾ ನೆರವು ನೀಡುತ್ತೇವೆ," ಎಂದು ಅವರು ಭರವಸೆ ನೀಡಿದರು.
ಎಚ್2 ಚಳವಳಿಯ ನಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ. ಸಂಜನಾ ಜಾನ್ ಮಾತನಾಡಿ, "ನಂದಿ ಬೆಟ್ಟಕ್ಕೆ ಹಾನಿಯಾದರೆ ಜಲಮೂಲಗಳು ಶಾಶ್ವತವಾಗಿ ನಾಶವಾಗಲಿವೆ. ಆದ್ದರಿಂದ ಎಲ್ಲರೂ ಕೈಜೋಡಿಸಿ ಇದನ್ನು ರಕ್ಷಿಸಬೇಕು," ಎಂದು ಕರೆ ನೀಡಿದರು.
ಹೋರಾಟಕ್ಕೆ ಒಗ್ಗಟ್ಟಿನ ಕರೆ
ಪ್ರತಿಷ್ಠಾನದ ಗೌರವಾಧ್ಯಕ್ಷ ಮಂಜುನಾಥ್ ಹೆಗಡೆ ಮಾತನಾಡಿ, "ನಂದಿ ಬೆಟ್ಟದ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಪಾರಂಪರಿಕ ತಾಣವನ್ನಾಗಿ ಘೋಷಿಸಿದರೆ ಮಾತ್ರ ಉಳಿಸಿಕೊಳ್ಳಲು ಸಾಧ್ಯ. ಸಮೀಪದ ಈಶಾ ಫೌಂಡೇಷನ್‌ನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಮತ್ತು ಗಿಡಮರಗಳನ್ನು ಕಡಿಯದಂತೆ ಕಾನೂನು ಹೋರಾಟ ನಡೆಸುತ್ತಿದ್ದೇವೆ," ಎಂದು ತಿಳಿಸಿದರು.
ಅಗತ್ಯವಿಲ್ಲ
ಇದೇ ಸಂದರ್ಭದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಅಗತ್ಯತೆಯನ್ನೂ ಡಾ. ರೆಡ್ಡಿ ಪ್ರಶ್ನಿಸಿದರು. "ಶೇ. 0.01 ರಷ್ಟು ಜನರಿಗಾಗಿ ಸಾವಿರಾರು ಎಕರೆ ಗಿಡಮರಗಳನ್ನು ಕಡಿದು ವಿಮಾನ ನಿಲ್ದಾಣ ನಿರ್ಮಿಸುವುದು ಸರಿಯಲ್ಲ. ಈಗಾಗಲೇ ಒಂದು ವಿಮಾನ ನಿಲ್ದಾಣ ಇದ್ದು, ಅದು ನಗರಕ್ಕೆ ಸಾಕಾಗುತ್ತದೆ. ಆದರೆ ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭೂವಿಜ್ಞಾನಿ ಪ್ರೊ. ಟಿ.ಜೆ. ರೇಣುಕಾ ಪ್ರಸಾದ್, ಕೃಷಿ ಇಲಾಖೆಯ ಮಾಜಿ ನಿರ್ದೇಶಕ ಎಸ್. ನಾರಾಯಣ ಸ್ವಾಮಿ, ಸುಪ್ರೀಂ ಕೋರ್ಟ್ ವಕೀಲ ಮಂಜುನಾಥ ಮಾಡ್ಯಾಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.