ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ | ಸ್ಥಳ ಪರಿಶೀಲನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ದೇಶನ

ನವದೆಹಲಿಯಲ್ಲಿ ನಡೆದ ಸಮಿತಿಯ 85ನೇ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯ ಸೂಚನೆಗೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವೂ ಒಪ್ಪಿಗೆ ನೀಡಿದೆ.

Update: 2025-09-20 08:09 GMT
Click the Play button to listen to article

ಪಶ್ಚಿಮ ಘಟ್ಟದ ಶರಾವತಿ ಕಣಿವೆಯಲ್ಲಿ ವಿದ್ಯುತ್‌ ಉತ್ಪಾದನಾ ಯೋಜನೆಯಾದ ʼಶರಾವತಿ ಪಂಪ್ಡ್ ಸ್ಟೋರೇಜ್ʼ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತನ್ನ ಸ್ಥಾಯಿ ಸಮಿತಿ ಸದಸ್ಯರಿಗೆ ಸೂಚನೆ ನೀಡಿದೆ.

ನವದೆಹಲಿಯಲ್ಲಿ ನಡೆದ ಸಮಿತಿಯ 85ನೇ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯ ಸೂಚನೆಗೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವೂ ಒಪ್ಪಿಗೆ ನೀಡಿದೆ. 

ತಾತ್ವಿಕ ಅನುಮೋದನೆಗೆ ಆಕ್ಷೇಪ

ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿದೆ. ಆದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯರಾದ ಎಚ್.ಎಸ್.ಸಿಂಗ್ ಮತ್ತು ಆರ್.ಸುಕುಮಾರ್ ಅವರು ಕಳೆದ ಜೂನ್ ತಿಂಗಳ ಸಭೆಯಲ್ಲೇ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು.

“ಯೋಜನೆಯು ಪಶ್ಚಿಮ ಘಟ್ಟದ ಹೃದಯಭಾಗದಲ್ಲಿದೆ, ಇದು ಯುನೆಸ್ಕೋ ಜೀವವೈವಿಧ್ಯ ತಾಣ. ಯೋಜನೆ ಜಾರಿಗೆಯಾದರೆ ಅಪಾರ ಹಾನಿ ಸಂಭವಿಸುತ್ತದೆ. ತರಾತುರಿಯಲ್ಲಿ ಅನುಮೋದನೆ ನೀಡುವುದು ಸರಿಯಲ್ಲ” ಎಂದು ಎಚ್ಚರಿಸಿದ್ದರು.

ಪರಿಶೀಲನೆ ನಡೆಸುವ ಸಮಿತಿ

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸದಸ್ಯರಾದ ಎಸ್.ಎಸ್.ಸಿಂಗ್, ಆರ್.ಸುಕುಮಾರ್ ಹಾಗೂ ಪರಿಸರ ಇಲಾಖೆಯ ನಾಮನಿರ್ದೇಶಿತ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಅರಣ್ಯ ಮತ್ತು ಜೀವವೈವಿಧ್ಯಕ್ಕೆ ಆಗಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಸಮಿತಿಯು ಸ್ಥಳೀಯರು ಹಾಗೂ ತಜ್ಞರ ಅಭಿಪ್ರಾಯಗಳನ್ನು ಆಲಿಸಿ ವರದಿ ನೀಡಲಿದೆ. ಇದರಿಂದ ಸ್ಥಳೀಯರು ಹಾಗೂ ಹೋರಾಟಗಾರರು ತುಸು ನಿಟ್ಟುಸಿರು ಬಿಡುವಂತಾಗಿದೆ.

ಯೋಜನೆಯ ವೈಶಿಷ್ಟ್ಯಗಳೇನು?

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಡಿ ತಲಾ 250 ಮೆಗಾವ್ಯಾಟ್‌ ಉತ್ಪಾದನೆಯ ಎಂಟು ಕಿರು ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ 2 ಸಾವಿರ ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಗುರಿ ಇದೆ.

ಒಟ್ಟು 9 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ 352.77 ಎಕರೆ ಭೂಮಿ ಅಗತ್ಯವಾಗಿದೆ. ಇದರಲ್ಲಿ 133.81 ಎಕರೆ ಅರಣ್ಯ ಭೂಮಿ ಇರಲಿದೆ. ಗೇರುಸೊಪ್ಪ ಹಾಗೂ ತಲಕಳಲೆ ಜಲಾಶಯಗಳ ನೀರನ್ನೇ ಯೋಜನೆಗೆ ಬಳಸಲಾಗುತ್ತದೆ. ಇದಕ್ಕಾಗಿ ಹೊಸ ಜಲಾಶಯ ನಿರ್ಮಿಸುವ ಅಗತ್ಯವಿಲ್ಲ. ಕೆಪಿಸಿಎಲ್‌ ತಯಾರಿಸಿರುವ ಸಮಗ್ರ ಯೋಜನಾ ವರದಿಗೆ 2024 ಆಗಸ್ಟ್‌ ತಿಂಗಳಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮೋದನೆ ನೀಡಿತ್ತು.

ಯೋಜನೆಗೆ ಸಾರ್ವಜನಿಕರ ಆಕ್ಷೇಪ

ಶಿವಮೊಗ್ಗ ಜಿಲ್ಲೆಯ ಕಾರ್ಗಲ್‌ನಲ್ಲಿ ಸೆ.16 ರಂದು ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸ್ಥಳೀಯರು ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಡಿಪಿಆರ್‌ ಮಾಹಿತಿ ನೀಡದೇ ಯೋಜನೆ ಆರಂಭಕ್ಕೆ ಪ್ರಯತ್ನಿಸಲಾಗುತ್ತಿದೆ. ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯಿಂದ ಅರಣ್ಯ, ಜೀವವೈವಿಧ್ಯ ಹಾಗೂ ನೀರಿನ ಹರಿವು ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರವಾದಿಗಳು ವಾದಿಸಿದ್ದರು.

ಸೆ.18 ರಂದು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ ನಡೆದಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲೂ ಸ್ಥಳೀಯರು ಹಾಗೂ ಹೋರಾಟಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.

ಯೋಜನೆ ಬಗ್ಗೆ ಕಳವಳ ಏಕೆ?

ಪಶ್ಚಿಮ ಘಟ್ಟ ಸಾಲಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲೇ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಬರುವುದರಿಂದ ಅರಣ್ಯ ನಾಶ, ಸುರಂಗಗಳ ನಿರ್ಮಾಣದಿಂದ ಭೂಕುಸಿತದ ಭೀತಿ ವ್ಯಕ್ತವಾಗಿದೆ. ಏಷ್ಯಾದಲ್ಲೇ ಅತಿ ಹೆಚ್ಚು ಸಿಂಹ ಬಾಲ ಸಿಂಗಳೀಕಗಳಿರುವ ಈ ಪ್ರದೇಶದಲ್ಲಿ ಯೋಜನೆ ಅನುಷ್ಠಾನದಿಂದ ಅಪರೂಪದ ವನ್ಯಜೀವಿಗಳು ವಲಸೆ ಹೋಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದರು. ಸುರಂಗಗಳ ನಿರ್ಮಾಣದಿಂದ ನೈಸರ್ಗಿಕ ನದಿ ಹರಿವು ಕೂಡ ಬದಲಾಗುವ ಭೀತಿ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ವಿದ್ಯುತ್ ನಿಗಮ (KPCL) ಪರಿಸರದ ಮೇಲೆ ಅಲ್ಪ ಮಟ್ಟಿನ ಪ್ರಭಾವ ಉಂಟಾಗಲಿದೆ. ಸುರಂಗ ಮಾರ್ಗದಲ್ಲೇ ಹೆಚ್ಚಿನ ಕಾಮಗಾರಿಗಳುಯ ನಡೆಯುವುದರಿಂದ ವನ್ಯ ಜೀವಿಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿತ್ತು. ಆದಾಗ್ಯೂ, ಪರಿಸರ ಹೋರಾಟಗಾರರ ಆತಂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳ ಪರಿಶೀಲನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧರಿಸಿರುವುದನ್ನು ಹೋರಾಟಗಾರರು ಸ್ವಾಗತಿಸಿದ್ದಾರೆ.

Tags:    

Similar News