ಸಂಪುಟ ಪುನಾರಚನೆಗೆ ರಾಷ್ಟ್ರೀಯ ನಾಯಕತ್ವ ಸಮ್ಮತಿ: 'ಪಟ್ಟಿ ತನ್ನಿ, ಒಟ್ಟಾಗಿ ಚರ್ಚಿಸೋಣ' ಎಂದ ಖರ್ಗೆ
ಮುಖ್ಯಮಂತ್ರಿಗಳ ವಾದವನ್ನು ಆಲಿಸಿದ ಖರ್ಗೆಯವರು, ಸಂಪುಟ ಪುನಾರಚನೆಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಡನೆ ಒಟ್ಟಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ನಡೆಸಿದ ಮಾತುಕತೆ ನಡೆಸಿದರು.
ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಹುದಿನಗಳ ಚರ್ಚೆಗೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಗೋಚರಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಸಂಪುಟ ಪುನಾರಚನೆಗೆ ರಾಷ್ಟ್ರೀಯ ನಾಯಕತ್ವವು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.
ಸೋಮವಾರ ರಾತ್ರಿ ಖರ್ಗೆ ಅವರ ನಿವಾಸದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ನಡೆದ ಈ ಮಹತ್ವದ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಅಗತ್ಯವನ್ನು ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಕೆಲವು ಸಚಿವರ ಕಾರ್ಯವೈಖರಿ ತೃಪ್ತಿಕರವಾಗಿಲ್ಲದ ಕಾರಣ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು.
ಮುಖ್ಯಮಂತ್ರಿಗಳ ವಾದವನ್ನು ಆಲಿಸಿದ ಖರ್ಗೆಯವರು, ಸಂಪುಟ ಪುನಾರಚನೆಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಡನೆ ಒಟ್ಟಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
"ಯಾವ ಸಚಿವರನ್ನು ಕೈಬಿಡಬೇಕು ಮತ್ತು ಅವರ ಸ್ಥಾನದಲ್ಲಿ ಯಾವ ಶಾಸಕರಿಗೆ ಅವಕಾಶ ನೀಡಬೇಕು ಎಂಬುದರ ಕುರಿತು ತಾವು ಒಂದು ಸ್ಪಷ್ಟವಾದ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬನ್ನಿ. ನಂತರ ನಾವೆಲ್ಲರೂ ಒಟ್ಟಿಗೆ ಕುಳಿತು ಬಗ್ಗೆ ಚರ್ಚಿಸೋಣ," ಎಂದು ಖರ್ಗೆಯವರು ಸಿದ್ದರಾಮಯ್ಯನವರಿಗೆ ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.
ಬೆಳಗಾವಿ ಅಧಿವೇಶನ ಮುಗಿದ ನಂತರ ಅಥವಾ ಅದಕ್ಕೂ ಮೊದಲೇ ಸೂಕ್ತ ಸಮಯ ನೋಡಿಕೊಂಡು ಈ ಕುರಿತು ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ. ಆ ಮೂಲಕ, ಅನಗತ್ಯ ಗೊಂದಲಗಳಿಗೆ ಅವಕಾಶ ಕೊಡದೆ, ಎಲ್ಲರ ಒಪ್ಪಿಗೆಯೊಂದಿಗೆ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಾಂಗ್ರೆಸ್ ವರಿಷ್ಠರ ಉದ್ದೇಶವಾಗಿದೆ.