Urban Migration | ಬೆಂಗಳೂರು ಸೇರಿದಂತೆ ನಗರ ವಲಸೆ ಹೆಚ್ಚಳ: ನಾರಾಯಣಮೂರ್ತಿ ಭವಿಷ್ಯ

ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ಬೆಂಗಳೂರು ಸೇರಿದಂತೆ ನಗರ ವಲಸೆಯ ಸವಾಲು ಮತ್ತು ಆತಂಕಗಳ ಕುರಿತು ಭವಿಷ್ಯ ನುಡಿದಿದ್ದಾರೆ.

Update: 2024-12-25 08:11 GMT
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ
Click the Play button to listen to article

ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ ಆರ್‌ ನಾರಾಯಣ ಮೂರ್ತಿ ಅವರು ಇದೀಗ ಬೆಂಗಳೂರು ಸೇರಿದಂತೆ ನಗರ ವಲಸೆಯ ಸವಾಲು ಮತ್ತು ಆತಂಕಗಳ ಕುರಿತು ಭವಿಷ್ಯ ನುಡಿದಿದ್ದಾರೆ.

ತಾಪಮಾನ ಮತ್ತು ಹವಾಮಾನ ವೈಪರೀತ್ಯಗಳು ನಗರಗಳ ಮೇಲೆ ಉಂಟುಮಾಡುತ್ತಿರುವ ಒತ್ತಡಗಳ ಬಗ್ಗೆ ತಕ್ಷಣ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ವಾಸಯೋಗ್ಯವಲ್ಲದ ಗ್ರಾಮೀಣ ಭಾಗಗಳಿಂದ ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಂತಹ ನಗರಗಳಿಗೆ ಸಾಮೂಹಿಕ ವಲಸೆ ಹೆಚ್ಚಿ, ನಗರ ಜನಜೀವನ ಕೂಡ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪುಣೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ಭಾರತ ಸೇರಿ ಹಲವು ದೇಶಗಳಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಹವಾಮಾನ ಬದಲಾಗುತ್ತಿದ್ದು ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ನೋಡುತ್ತಿದ್ದೇವೆ. ಹವಾಮಾನದ ಈ ವೈಪರೀತ್ಯದಿಂದಾಗಿ ಮುಂದಿನ 2 ದಶಕಗಳಲ್ಲಿ ಭಾರತದ ಕೆಲವು ಗ್ರಾಮೀಣ ಪ್ರದೇಶಗಳು ವಾಸಿಸಲು ಯೋಗ್ಯವಾಗಿರುವುದಿಲ್ಲ. ಇದರಿಂದಾಗಿ ಲಕ್ಷಾಂತರ ಜನರು ಅಂತಹ ಪ್ರದೇಶಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುವ ಸಾಧ್ಯತೆಗಳಿವೆ. ರಾಜ್ಯಗಳ ಗ್ರಾಮೀಣ ಭಾಗಗಳಿಂದ ಬೆಂಗಳೂರು, ಪುಣೆ, ಹೈದರಾಬಾದ್‌ನಂತಹ ನಗರಗಳಿಗೆ ವಲಸೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಬೃಹತ್ ವಲಸೆಯಿಂದ ನಗರಗಳಿಗೆ ಸವಾಲು

ಕ್ಷಿಪ್ರ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಭಾರತದ ನಗರಗಳು ಈಗಾಗಲೇ ತಮ್ಮ ಮಿತಿ ಮೀರಿ ವಿಸ್ತರಿಸಲ್ಪಟ್ಟಿವೆ. ಇದೀಗ ಹವಾಮಾನ ಬದಲಾವಣೆಯಿಂದಾಗಿ ವಲಸಿಗರ ಒಳಹರಿವು ಈ ನಗರಗಳಿಗೆ ಸವಾಲುಗಳನ್ನು ತಂದೊಡ್ಡಬಹುದು. ಮೂಲಸೌಕರ್ಯ ಮತ್ತು ಸಂಪನ್ಮೂಲಗಳ‌ ತೀವ್ರ ಕೊರತೆ ಉಲ್ಬಣಗೊಳಿಸಬಹುದು. ಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆಗಳಿಂದ ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ಗಳಲ್ಲಿ ವಾಸಿಸುವುದು ಸುಲಭವಲ್ಲ. ಈ ನಗರಗಳಲ್ಲಿ ವಾಸಿಸುವುದು ಅತ್ಯಂತ ಸವಾಲಿನ ಕೆಲಸ. ಸಾರಿಗೆ ಕಷ್ಟಕರವಾಗಿದೆ ಮತ್ತು ಮಾಲಿನ್ಯದ ಮಟ್ಟಗಳು ಹೆಚ್ಚುತ್ತಿವೆ. ಆ ಸಂಕಷ್ಟಗಳು ನಗರ ವಲಸೆಯ ಹೆಚ್ಚಳದಿಂದಾಗಿ ಇನ್ನು ಮುಂದೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇವೆ ಎಂದು ಅವರು ನಗರ ವಲಸೆಯ ಬಿಕ್ಕಟ್ಟುಗಳ ಬಗ್ಗೆ ಎಚ್ಚರಿಸಿದ್ದಾರೆ.  

ನಗರ ವಲಸೆ ತಡೆಯಬೇಕಾಗಿದೆ

ಈ ನಿಟ್ಟಿನಲ್ಲಿ ಈ ಸವಾಲನ್ನು ಎದುರಿಸಲು ಮತ್ತು ಇಂತಹ ವಲಸೆಯನ್ನು ತಡೆಯಲು ಕಾರ್ಪೊರೇಟ್ ಜಗತ್ತು, ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ನಡುವಿನ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದ ಅವರು, ಬೆಂಗಳೂರಿನಂತಹ ನಗರಗಳಿಗೆ ಇತರೆಡೆಯಿಂದ ಬರುವ ವಲಸೆಯನ್ನು ತಡೆಯಬೇಕಿದೆ ಎಂದೂ ಹೇಳಿದ್ದಾರೆ.

ತಂಪಾದ ಹವಾಮಾನ, ಐಟಿ-ಬಿಟಿ, ರಿಯಲ್ ಎಸ್ಟೇಟ್ ಕೇಂದ್ರ, ಅಪರಾಧ ಪ್ರಮಾಣ ಕಡಿಮೆ, ಸುರಕ್ಷತೆ ಈ ಎಲ್ಲಾ ದೃಷ್ಟಿಯಿಂದ ಬೆಂಗಳೂರಿಗೆ ಬರುತ್ತೇವೆ ಎನ್ನುವವರ ಸಂಖ್ಯೆ ಹೆಚ್ಚಿದೆ. ಮೆಟ್ರೋ, ಸುರಂಗ ಮಾರ್ಗಗಳ ನಿರ್ಮಾಣದತ್ತ ಸರ್ಕಾರದ ಗಮನವಿದೆ. ಬೆಂಗಳೂರನ್ನು ಬಡವರು ಕೂಡ ಬದುಕಲು ಯೋಗ್ಯವಾದ ನಗರವನ್ನಾಗಿ ಮಾಡಲು ಅವರಿಗೆ ಬೇಕಾದ ವಸತಿ, ಶಿಕ್ಷಣ, ಆರೋಗ್ಯದಂತಹ ಮೂಲ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಹಾಗಾಗಿ ಒಂದು ಕಡೆ, ನಮ್ಮದೇ ಗ್ರಾಮೀಣ ಭಾಗಗಳಿಂದ ವಲಸೆ ಬರುವವರು ಸಾಕಷ್ಟು ಮಂದಿ ಇದ್ದರೆ, ಮತ್ತೊಂದು ಕಡೆ ಹವಾಮಾನ ಬದಲಾವಣೆಯಿಂದ ಬೇಸತ್ತು ಬೇರೆ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆಯೂ ದುಪ್ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ, ಬೆಂಗಳೂರಿಗೆ ಬರುವ ಜನರ ವಲಸೆ ತಡೆಯುವ ಅಗತ್ಯದ ಕುರಿತು ಸೂಚ್ಯವಾಗಿ ಹೇಳಿದ್ದಾರೆ.

ದೇಶದ ಒಳಿತಿಗಾಗಿ ದುಡಿಯುವುದೇ ನೈಜ ರಾಷ್ಟ್ರೀಯತೆ

ಇಂದಿನ ಯುವಕರು ಐಷಾರಾಮಿ ಜೀವನ ತ್ಯಜಿಸುವ ಅಗತ್ಯವನ್ನು ಒತ್ತಿ ಹೇಳಿದ ಮೂರ್ತಿ, ಯುವ ಪೀಳಿಗೆ ರಾಷ್ಟ್ರ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ಸಮಾಜದ ವಂಚಿತ ವರ್ಗಗಳ ಬಗ್ಗೆ ನಾವು ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನಾವು ಪ್ರಾಣಿಗಳಿಗಿಂತ ಕಡಿಮೆಯಿಲ್ಲ. ನಿಜವಾದ ರಾಷ್ಟ್ರೀಯತೆ ಎಂದರೆ ಜವಾಬ್ದಾರಿಯುತ ನಾಗರಿಕರಾಗಿ ಮತ್ತು ದೇಶದ ಒಳಿತಿಗಾಗಿ ಕೆಲಸ ಮಾಡುವುದು. ಕೇವಲ ರಾಷ್ಟ್ರಧ್ವಜವನ್ನು ಸುತ್ತಿಕೊಂಡ ಮಾತ್ರಕ್ಕೆ ಯಾರೂ ನಿಜವಾದ ರಾಷ್ಟ್ರೀಯವಾದಿಯಾಗುವುದಿಲ್ಲ ಎಂದು ಹೇಳಿದ ಅವರು, ರಾಷ್ಟ್ರಪ್ರೇಮ ಮತ್ತು ಶ್ರಮದ ದುಡಿಮೆಯ ಸರಿಯಾದ ತಿಳಿವಳಿಕೆಯ ಕುರಿತು ವಿವರಿಸಿದರು.

Tags:    

Similar News