NABARD Loan Cut | ಸಾಲ ಕಡಿತ ಮಾಡದಂತೆ ಕೋರಿ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
2023-24ರಲ್ಲಿ ನಬಾರ್ಡ್ 5600 ಕೋಟಿ ರೂ. ಮಂಜೂರು ಮಾಡಿತ್ತು. 2024-25ನೇ ಸಾಲಿನಲ್ಲಿ ಕೇವಲ 2340 ಕೋಟಿ ರೂ. ಮಾತ್ರ ಮಂಜೂರು ಮಾಡಿದೆ. ಈ ತಾರತಮ್ಯ ಸರಿಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.;
ನಬಾರ್ಡ್ ನೀಡುವ ಅಲ್ಪಾವಧಿಯ ಕೃಷಿ ಸಾಲ ಮಿತಿಯನ್ನು ಕಡಿತ ಮಾಡಿರುವ ಕ್ರಮವನ್ನು ಕೂಡಲೇ ಸರಿಪಡಿಸಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಬಾರ್ಡ್ ಸಾಲ ಕಡಿತವು ರಾಜ್ಯದ ರೈತರಲ್ಲಿ ಆತಂಕ ಮೂಡಿಸಿದೆ. 2023-24ರಲ್ಲಿ ನಬಾರ್ಡ್ 5600 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ, 2024-25ನೇ ಸಾಲಿನಲ್ಲಿ ಕೇವಲ 2340 ಕೋಟಿ ರೂ. ಮಾತ್ರ ಮಂಜೂರು ಮಾಡಿರುವುದರಿಂದ ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದೆ. ಈ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಈಚೆಗೆ ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದೆ. ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ, ನಬಾರ್ಡ್ ಸಾಲ ನೀಡಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
2023-24 ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಒದಗಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಈವರೆಗೂ ಭರವಸೆ ಈಡೇರಿಸಿಲ್ಲ. ನೀರಾವರಿ ಯೋಜನೆಗಳಿಗೆ ವೇಗ ನೀಡಲು ಹಣಕಾಸಿನ ನೆರವು ಅಗತ್ಯವಾಗಿದೆ. ಹಾಗಾಗಿ ವಿಶೇಷ ನೆರವು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆಯೂ ಸಿಎಂ ತಮ್ಮ ಪತ್ರದಲ್ಲಿ ಪ್ರಧಾನಿ ಅವರನ್ನು ಕೋರಿದ್ದಾರೆ.
ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳಿಗೆ ಜಲ ಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿ ವಿಳಂಬವಾಗಿದೆ. ಕಾವೇರಿ ನದಿಗೆ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕಳಸಾ ಬಂಡೂರಿ ಯೋಜನೆಗಳು ಕುಂಟುತ್ತಾ ಸಾಗಿವೆ. ಯೋಜನೆಗಳ ಮುಂದುವರಿಕೆಗೆ ಜಲ ಶಕ್ತಿ ಸಚಿವಾಲಯ ಮತ್ತು ಪರಿಸರ ಸಚಿವಾಲಯದ ಅನುಮೋದನೆ ಅಗತ್ಯವಾಗಿದೆ. ಶೀಘ್ರವೇ ಅನುಮತಿ ನೀಡುವಂತೆ ಎರಡು ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.
ಬೆಂಗಳೂರು ನಗರ ದೇಶದ ಟೆಕ್ ಮತ್ತು ಅನ್ವೇಷಣಾ ರಾಜಧಾನಿಯಾಗಿ ಹೊರಹೊಮ್ಮಿದೆ. ಜೊತೆಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ನೀಡುತ್ತಿರುವ ಅಗ್ರ ಮೂರು ನಗರಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಅಗತ್ಯವಿದೆ. ಈಗಾಗಲೇ ಜೂನ್ 29 ರಂದು ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಈ ಎಲ್ಲ ಯೋಜನೆಗಳ ಕುರಿತು ವಿವರಿಸಿದ್ದೇನೆ. ನಗರಾಭಿವೃದ್ಧಿ ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಕರ್ನಾಟಕದ ಮನವಿಗಳನ್ನು ಪರಿಗಣಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ವಿಶೇಷ ನೆರವು ನೀಡುವಂತೆ ಸೂಚಿಸಬೇಕು ಎಂದು ಮೋದಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 13 ಮಹಾನಗರ ಪಾಲಿಕೆಗಳಿವೆ. ಅವುಗಳೆಲ್ಲ ಹೆಚ್ಚು ಬಂಡವಾಳ ಹೂಡಿಕೆ ಬಯಸುವ ಗ್ರೇಡ್-2 ನಗರಗಳಾಗಿವೆ. ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಕಾರ್ಯಕ್ರಮದಡಿ ಮುಂದಿನ ಮೂರು ವರ್ಷಗಳಲ್ಲಿ ರೂ.2,000 ಕೋಟಿಯನ್ನು ಈ ನಗಗಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ಆದಾಗ್ಯೂ, ಈ ನಗರಗಳಿಗೆ ಮೂಲಭೂತ ಸೌಕರ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಮೃತ್ ಅಥವಾ ಇತರ ಯಾವುದೇ ಯೋಜನೆಗಳಡಿ ಈ ನಗರಗಳಿಗೆ ರೂ.10,000 ಕೋಟಿ ಒದಗಿಸಲು ನಗರಾಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೂಡ ಸಿದ್ದರಾಮಯ್ಯ ಕೋರಿದ್ದಾರೆ.
15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯದ ಪಾಲಿನ ತೆರಿಗೆ ಕಡಿತ ಸರಿದೂಗಿಸಲು ರೂ.5495 ಕೋಟಿ, ಪೆರಿಫೆರಲ್ ರಿಂಗ್ ರಸ್ತೆ ಮತ್ತು ಜಲಮೂಲಗಳ ಪುನಶ್ಚೇತನಕ್ಕೆ 6000 ಕೋಟಿ ರೂ ವಿಶೇಷ ಅನುದಾನ ಒದಗಿಸಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು. ಅಲ್ಲದೇ 16 ನೇ ಹಣಕಾಸು ಆಯೋಗದೊಂದಿಗೆ ಹಣಕಾಸು ಸಚಿವಾಲಯವು ಭವಿಷ್ಯದಲ್ಲಿ ಕೇಂದ್ರ ತೆರಿಗೆಗಳ ಹೆಚ್ಚಿನ ಪಾಲನ್ನು ರಾಜ್ಯಗಳಿಗೆ ನೀಡುವಂತೆ ನೋಡಿಕೊಳ್ಳಬೇಕು ಎಂದೂ ಅವರು ಮನವಿ ಮಾಡಿದ್ದಾರೆ.