Mysore MUDA Case | ಲೋಕಾಯುಕ್ತ ವಿರುದ್ಧ ರಾಜ್ಯಪಾಲರಿಗೆ ದೂರು
ಲೋಕಾಯುಕ್ತದ ಮೈಸೂರು ಅಧಿಕಾರಿಯೊಬ್ಬರು ದಾಳಿ ಕುರಿತು ಮೊದಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದರು. ನಂತರ ಎಲ್ಲರೂ ಜೊತೆಗೂಡಿ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ;
'ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬವರು ಸೋಮವಾರ ಇ-ಮೇಲ್ ಹಾಗೂ ಅಂಚೆ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಒಂದು ಸಾವಿರ ಪುಟಗಳ ಸಾಕ್ಷ್ಯ ಸಂಗ್ರಹಿಸಿದ್ದಾಗ್ಯೂ ದಾಳಿ ನಡೆಸದೇ, ಸರ್ಕಾರದ ಜೊತೆ ಶಾಮೀಲಾಗಿ ಕಿಕ್‌ಬ್ಯಾಕ್ ಪಡೆದು ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಅವರು ದೂರಿನಲ್ಲಿ ಕೋರಿದ್ದಾರೆ.
'ಲೋಕಾಯುಕ್ತದ ಮೈಸೂರು ಕಚೇರಿಯ ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ಮುಡಾದಲ್ಲಿನ ಅಕ್ರಮಗಳ ಕುರಿತು ಸಾಕ್ಷ್ಯ ಕಲೆಹಾಕಿ ಸರ್ಚ್ ವಾರಂಟ್ ಕೋರಿ ಅಂದಿನ ಲೋಕಾಯುಕ್ತ ಎಸ್.ಪಿ. ವಿ.ಜೆ. ಸುಜಿತ್ ಮೂಲಕ ಲೋಕಾಯುಕ್ತ ಬೆಂಗಳೂರು ಕಚೇರಿಗೆ ಮನವಿ ಸಲ್ಲಿಸಿತ್ತು. ಆದರೆ, ಉದ್ದೇಶಪೂರ್ವಕವಾಗಿ 28 ದಿನ ವಿಳಂಬ ಮಾಡಿ ಲೋಕಾಯುಕ್ತವು ಸರ್ಚ್ ವಾರಂಟ್ ನೀಡಿತು. ಅಷ್ಟರೊಳಗೆ, ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದಲೇ ಈ ಮಾಹಿತಿ ಸರ್ಕಾರಕ್ಕೆ ಸೋರಿಕೆ ಆಗಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಐಎಎಸ್ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿ 140ಕ್ಕೂ ಹೆಚ್ಚು ಕಡತಗಳನ್ನು ಮುಡಾ ಕಚೇರಿಯಿಂದ ಬೆಂಗಳೂರಿಗೆ ತರಿಸಿಕೊಂಡಿದ್ದರು. ಜುಲೈ 4ರಂದು ಎಸ್.ಪಿ. ಸುಜಿತ್ ಇಲ್ಲಿಂದ ವರ್ಗಾವಣೆಯಾಗಿದ್ದು, 5ರಂದು ಲೋಕಾಯುಕ್ತ ತನ್ನ ಸರ್ಚ್ ವಾರಂಟ್ ಹಿಂಪಡೆದಿದೆ' ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
'ಲೋಕಾಯುಕ್ತದ ಮೈಸೂರು ಅಧಿಕಾರಿಯೊಬ್ಬರು ದಾಳಿ ಕುರಿತು ಮೊದಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದರು. ನಂತರ ಎಲ್ಲರೂ ಜೊತೆಗೂಡಿ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಲೋಕಾಯುಕ್ತ ದಾಳಿ ನಡೆಯಲಿಲ್ಲ. ಸರ್ಚ್ ವಾರಂಟ್ ನೀಡಲು ವಿಳಂಬ ಮಾಡಿದ್ದರಿಂದ ಮುಡಾದಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ' ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
'ಲೋಕಾಯುಕ್ತಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇದ್ದರೂ ಸರ್ಚ್ ವಾರಂಟ್ ನೀಡಲು ವಿಳಂಬ ಮಾಡಿದ್ದೇಕೆ ಎಂಬುದರ ಬಗ್ಗೆ ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಶಾಮೀಲಾಗಿರುವ ಕರ್ನಾಟಕ ಲೋಕಾಯುಕ್ತದ ಹಿರಿಯ ಅಧಿಕಾರಿಗಳು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಬಗಲಿ, ಮುಡಾದ ಹಿಂದಿನ ಆಯುಕ್ತರಾದ ಡಿ.ಬಿ. ನಟೇಶ್, ಜಿ.ಟಿ. ದಿನೇಶ್‌ಕುಮಾರ್ ವಿರುದ್ಧ ತನಿಖೆ ನಡೆಸಬೇಕು' ಎಂದು ಕೋರಿದ್ದಾರೆ.