Mysore MUDA Case | ಲೋಕಾಯುಕ್ತ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ
ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಬಿಜೆಪಿ, ಜೆಡಿಎಸ್‌ನವರ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ ಎಂದು ಸಿಎಂ ಹೇಳಿದರು.;
ಮುಡಾ ನಿವೇಶನ ಹಂಚಿಕೆ ಪ್ರಕರಣದ ಮೊದಲ ಆರೋಪಿಯಾದ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಬೆಳಿಗ್ಗೆ10.10ಕ್ಕೆ ಸ್ವಂತ ವಾಹನದಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿತು.
ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ 14 ನಿವೇಶನ ಪಡೆಯುವಲ್ಲಿ ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕುರಿತಂತೆ ವಿಚಾರಣೆ ನಡೆಸಲಾಯಿತು.
ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಶೇ 50:50 ಅನುಪಾತದಲ್ಲಿ14 ನಿವೇಶನ ಹಂಚಿಕೆ ಮಾಡಲು ಪ್ರಭಾವ ಬಳಸಿರುವುದು, ಅದಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪಗಳಿವೆ. ಮುಡಾ ನಿವೇಶನ ಹಂಚಿಕೆಯ ಮಾಹಿತಿ ನಿಮಗೆ ಮೊದಲೇ ತಿಳಿದಿತ್ತಾ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.
ಭೂಮಿಗೆ ಪರ್ಯಾಯವಾಗಿ ವಿಜಯನಗರದಲ್ಲೇ ನಿವೇಶನ ಬೇಕೆಂದು ಅರ್ಜಿ ಹಾಕಲಾಗಿತ್ತಾ, 14 ನಿವೇಶನಗಳು ನಿಮ್ಮ ಪತ್ನಿ ಹೆಸರಿಗೆ ನೋಂದಣಿಯಾಗಿದ್ದ ಮಾಹಿತಿ ತಿಳಿದಿತ್ತಾ?, ನಿಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಪತ್ನಿಗೆ ಭೂಮಿಯನ್ನು ದಾನವಾಗಿ ನೀಡಿದ್ದರಾ, ಭೂ ವಿವಾದದ ಹಿನ್ನೆಲೆ ನಿಮಗೆ ಯಾವಾಗ ತಿಳಿಯಿತು?, ನಿವೇಶನ ಹಂಚಿಕೆ ವೇಳೆ ಮುಡಾ ಆಯುಕ್ತರನ್ನು ಸಂಪರ್ಕ ಮಾಡಲಾಗಿತ್ತಾ, ದಾಖಲೆಯಲ್ಲಿ ವೈಟ್ನರ್ ಹಾಕಿದ್ದು, ಅದರ ಹಿಂದಿರುವ ಪದಗಳು ಏನು ಎಂದು ಸಿಎಂ ಅವರನ್ನು ಪ್ರಶ್ನಿಸಲಾಯಿತು ಎಂದು ತಿಳಿದುಬಂದಿದೆ.
ನೀವು ಭೂಮಿಗೆ 65 ಕೋಟಿ ಪರಿಹಾರದ ಹಣವನ್ನು ಯಾವ ಆಧಾರದಲ್ಲಿ ಕೇಳಿದ್ದೀರಿ? ಕೆಸರೆ ಗ್ರಾಮದ ಸರ್ವೇ ನಂ.464 ನಲ್ಲಿ ನಿಮಗೆ ಜಮೀನು ಹೇಗೆ ಬಂತು? ಯಾರಿಗೆ ಮಾರಾಟ ಮಾಡಿದಿರಿ? ನಾಲ್ಕನೇ ಆರೋಪಿ ದೇವರಾಜ್ ನಿಮಗೆ ಹೇಗೆ ಗೊತ್ತು ? ಎಂದು ಪ್ರಶ್ನೆಗಳ ಸುರಿಮಳೆಗೈದರು. ಆದರೆ, ಎಲ್ಲ ಪ್ರಶ್ನೆಗಳಿಗೂ ಸಿಎಂ ಸಮಾಧಾನವಾಗಿಯೇ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 12.07ಕ್ಕೆ ಸಿಎಂ ಅವರು ಲೋಕಾಯುಕ್ತ ಕಚೇರಿಯಿಂದ ಹೊರಬಂದರು.
ಸಿಎಂ ವಿಚಾರಣೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಜೊತೆಗೆ ಲೋಕಾಯುಕ್ತ ಕಚೇರಿ ಸುತ್ತಲಿನ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ನನ್ನ ವಿರುದ್ಧ ಬಿಜೆಪಿ-ಜೆಡಿಎಸ್ ಸುಳ್ಳು ಆರೋಪ
ಲೋಕಾಯುಕ್ತ ವಿಚಾರಣೆ ಮುಗಿಸಿ ಹೊರಬಂದ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮುಡಾ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಲೋಕಾಯುಕ್ತ ಕಚೇರಿಗೆ ಬಂದು ವಿಚಾರಣೆ ಎದುರಿಸಿದ್ದೇನೆ ಎಂದು ಹೇಳಿದರು.
ಮುಡಾ ನಿವೇಶನಗಳನ್ನು ಕಾನೂನು ಪ್ರಕಾರವೇ ಪಡೆದಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದರು.
ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ನಾಯಕರ ಒತ್ತಾಯ ಕುರಿತ ಪ್ರಶ್ನೆಗೆ ಅವರು, ಬಿಜೆಪಿಯವರು ಯಾವುದಾದರೂ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಬಿಜೆಪಿ, ಜೆಡಿಎಸ್‌ನವರ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ ಎಂದೂ ಅವರು ಹೇಳಿದರು.