Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ

ಅಪರಿಚಿತ ವ್ಯಕ್ತಿ ತೋರಿಸಿರುವ ಸ್ಥಳಗಳನ್ನು ಗುರುತಿಸಿ ಶವಗಳನ್ನು ಹೊರತೆಗೆಯಲು ಅಗೆಯುವ ಕೆಲಸ ಪ್ರಾರಂಭಿಸಲಾಗಿದೆ.;

Update: 2025-07-29 09:58 GMT

ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಶವಗಳನ್ನು ಹುಡುಕುವ ಕಾರ್ಯ ಆರಂಭಿಸಿ ಅಗೆಯಲಾಗುತ್ತಿದೆ. 

ಅಪರಿಚಿತ ವ್ಯಕ್ತಿ ಶವಗಳನ್ನು ಹೂತಿಟ್ಟಿರುವ ಸ್ಥಳಗಳನ್ನು ಗುರುತಿಸಿದ್ದು, ಸುಮಾರು 13 ಸ್ಥಳಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಪರಿಚಿತ ವ್ಯಕ್ತಿ ತೋರಿಸಿರುವ ಸ್ಥಳಗಳನ್ನು ಗುರುತಿಸಿ ಶವಗಳನ್ನು ಹೊರತೆಗೆಯುವ ಕೆಲಸ ಪ್ರಾರಂಭಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.  ಅಲ್ಲದೇ ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಅವರ ಸಮಕ್ಷಮದಲ್ಲಿ ಅಗೆಯುವ ಕೆಲಸ ನಡೆಸಲಾಗುತ್ತಿದೆ ಎನ್ನಲಾಗಿದೆ. 

ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಮೊದಲು ಶವಗಳನ್ನು ಹೊರ ತೆಗೆಯುವ ಕೆಲಸ ನಡೆಸಲಾಗುತ್ತಿದೆ. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕಾರ್ಯ ನಡೆಸಲಾಗುತ್ತಿದೆ. ಶವಗಳನ್ನು ಹೊರತೆಗೆಯುವ ಕಾರ್ಯಕ್ಕೆ 10ಕ್ಕೂ ಹೆಚ್ಚುಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದ್ದು, ಧರ್ಮಸ್ಥಳದ ಗ್ರಾಮಪಂಚಾಯಿತಿ ಕಾರ್ಮಿಕರು ಅಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. 

ಶವಗಳನ್ನು ಹೂತಿಟ್ಟಿರುವ ಸ್ಥಳಗಳನ್ನು ಗುರುತಿಸಿರುವ ಪೊಲೀಸರು ಅಪರಿಚಿತ ವ್ಯಕ್ತಿಯ ಹೇಳಿರುವ ಸ್ಥಳಗಳಿಗೆ ಎಸ್ಐಟಿ ವಿಶೇಷ ಭದ್ರತೆ ಕಲ್ಪಿಸಿದೆ.  ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ ಇಬ್ಬರನ್ನು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಟ್ಟ ಅರಣ್ಯದಲ್ಲಿ ಸರ್ಪಗಾವಲು ಹಾಕಲಾಗಿದೆ. ಗುರುತಿಸಿದ ಜಾಗಗಳಿಗೆ ನಂಬರ್ ನೀಡಲಾಗಿದೆ. ಒಂದೆಡೆ ಅಗೆಯುವ ಕೆಲಸ ನಡೆಯುತ್ತಿದ್ದರೆ, ಉಳಿದಿರುವ ಜಾಗಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. 

ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಬಗ್ಗೆ ಅಪರಿಚಿತ ವ್ಯಕ್ತಿ ಹೇಳಿಕೆ ನೀಡಿದ ಬಳಿಕ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಸರ್ಕಾರವು ತನಿಖೆಗಾಗಿ ಹಿರಿಯ ಪೊಲೀಸ್‌ ಅಧಿಕಾರಿ ಪ್ರಣವ್‌ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖೆ ತಂಡ ರಚಿಸಲಾಗಿದೆ. ಧರ್ಮಸ್ಥಳದಲ್ಲಿ ಪೊಲೀಸ್‌ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. 


Live Updates
2025-07-29 10:53 GMT

ಜಿಪಿಎಸ್​ ಗುರುತು ಪತ್ತೆ

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ಸಾಕ್ಷಿ ದೂರುದಾರ ಎಸ್ಐಟಿ ಅಧಿಕಾರಿಗಳಿಗೆ ಸೋಮವಾರ ತೋರಿಸಿದ್ದರು. ಆ ಜಾಗಗಳ ಜಿಪಿಎಸ್‌ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್‌ ಕಟ್ಟಿ, ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದ್ದರು. ಜಾಗಗಳನ್ನು ಅಗೆಯುವ ದೃಶ್ಯವನ್ನು ಎಸ್‌ಐಟಿಯ ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ.

2025-07-29 10:52 GMT

ಹಿರಿಯ ಅಧಿಕಾರಿಗಳ ಮಾರ್ಗದರ್ಶನ

ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್ಐಟಿಯ ಅಧಿಕಾರಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಎಸ್‌.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿದ್ದು ಮಾರ್ಗದರ್ಶನ‌ ಮಾಡುತ್ತಿದ್ದಾರೆ. ವಿಧಿವಿಜ್ಞಾನ ತಂಡದ ಅಧಿಕಾರಿಗಳೂ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗಕ್ಕೆ ತೆರಳಿದ್ದಾರೆ. ಸಾಕ್ಷಿ ದೂರುದಾರನ ಜೊತೆಗೆ ವಕೀಲರ ತಂಡವೂ ಸ್ಥಳದಲ್ಲಿದೆ. 

2025-07-29 10:26 GMT

ಹಿರಿಯ ಅಧಿಕಾರಿಗಳ ಸಾಥ್​

ಈ ಮಹತ್ವದ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಎಸ್ಐಟಿಯ ಡಿಐಜಿ ಎಂ.ಎನ್. ಅನುಚೇತ್ ಮತ್ತು ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಖುದ್ದು ಸ್ಥಳದಲ್ಲಿದ್ದುಕೊಂಡು ನೋಡಿಕೊಳ್ಳುತ್ತಿದ್ದಾರೆ.

2025-07-29 10:25 GMT

ಸದ್ಯ ಒಂದೇ ಸ್ಥಳದಲ್ಲಿ ಅಗೆತ

ಸದ್ಯಕ್ಕೆ ಕೇವಲ ಒಂದೇ ಜಾಗದಲ್ಲಿ ಅಗೆತ ನಡೆಸಲಾಗುತ್ತಿದೆ. ಈ ಸ್ಥಳದ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ, ಸಾಕ್ಷಿದಾರರು ತೋರಿಸಬಹುದಾದ ಬೇರೆ ಸ್ಥಳಗಳಲ್ಲಿ ಅಗೆಯುವ ಕಾರ್ಯವನ್ನು ಆರಂಭಿಸಲಾಗುವುದು.

2025-07-29 10:24 GMT

ಇಲ್ಲ ಎಂದು ಮನವರಿಕೆ ಆಗುವ ತನಕ ಅಗೆತ

ಸಾಕ್ಷಿದಾರರಿಗೆ ಸಂಪೂರ್ಣ ತೃಪ್ತಿಯಾಗುವವರೆಗೆ ಮತ್ತು ಇನ್ನು ಅಗೆಯುವ ಅಗತ್ಯವಿಲ್ಲ ಎಂದು ತಮಗೂ ಮನವರಿಕೆಯಾಗುವ ತನಕ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಎಸ್ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

2025-07-29 10:23 GMT

ಮೂರು ಅಡಿ ಆಳದವರೆಗೆ ಅಗೆತ, ಹೆಣಗಳ ಸುಳಿವಿಲ್ಲ

ಇಲ್ಲಿಯವರೆಗೆ ಸುಮಾರು 3 ಅಡಿ ಆಳದವರೆಗೆ ಮಣ್ಣನ್ನು ಅಗೆದು ತೆಗೆಯಲಾಗಿದ್ದು, ಯಾವುದೇ ಮೃತದೇಹದ ಕುರುಹುಗಳು ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

2025-07-29 10:22 GMT

ದೊಡ್ಡ ತಂಡದಿಂದ ನೇತೃತ್ವ 

ಸಾಕ್ಷಿದಾರರು ಗುರುತಿಸಿದ ಮೊದಲ ಸ್ಥಳದಲ್ಲಿ ಅಗೆಯುವ ಕಾರ್ಯವನ್ನು ಮಧ್ಯಾಹ್ನ ಸುಮಾರು 12 ಗಂಟೆಗೆ ಆರಂಭಿಸಲಾಯಿತು. ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

2025-07-29 10:21 GMT

ಜೆಸಿಬಿ ಮೂಲಕ ಅಗೆತ ಶುರು

ನೀರಿನ ಸಮಸ್ಯೆಯನ್ನು ನಿವಾರಿಸಿ, ಆಳವಾಗಿ ಅಗೆಯಲು ಸ್ಥಳಕ್ಕೆ ಜೆಸಿಬಿಯನ್ನು ತರಿಸಿ ಕಾರ್ಯಾಚರಣೆ ಮುಂದುವರಿಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದು ಅಗೆತದ ಕಾರ್ಯಕ್ಕೆ ವೇಗ ನೀಡುವ ನಿರೀಕ್ಷೆಯಿದೆ.

2025-07-29 10:20 GMT

ನೇತ್ರಾವತಿ ನದಿ ದಡದಲ್ಲಿ ಶವ ಪತ್ತೆಗೆ SIT ಅಗೆತಕ್ಕೆ ನೀರಿನ ಒರತೆ ಅಡ್ಡಿ!

ಸಾಕ್ಷಿದಾರರು ತೋರಿಸಿದ ಮೊದಲ ಸ್ಥಳವು ನೇತ್ರಾವತಿ ನದಿಯ ದಡದಲ್ಲೇ ಇದೆ. ನದಿ ಮತ್ತು ಅಗೆಯುತ್ತಿರುವ ಜಾಗದ ನಡುವೆ ಕೇವಲ 10 ಮೀಟರ್ ಅಂತರವಿದೆ. ಇದೀಗ ಅಗೆತದ ಕಾರ್ಯಕ್ಕೆ ನೀರಿನ ಒರತೆಯು ದೊಡ್ಡ ಅಡ್ಡಿಯಾಗಿದೆ. ಮಣ್ಣು ತೆಗೆದಂತೆಲ್ಲಾ ನೆಲದಿಂದ ನಿರಂತರವಾಗಿ ನೀರು ಒಸರುತ್ತಿದ್ದು, ಇದು ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ ಮತ್ತು ವಿಳಂಬಕ್ಕೆ ಕಾರಣವಾಗಿದೆ.  

2025-07-29 10:19 GMT

ನೇತ್ರಾವತಿ ನದಿ ದಡದಲ್ಲಿ ಶವ ಪತ್ತೆಗೆ ಅಗೆತ, ಸವಾಲುಗಳ ಸುರಿಮಳೆ!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಳೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, ವಿಶೇಷ ತನಿಖಾ ದಳವು (SIT) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೂಳಲಾಗಿರುವ ಮೃತದೇಹಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ, ಸಾಕ್ಷಿದಾರರು ತೋರಿಸಿದ ಜಾಗದಲ್ಲಿ ಅಗೆತದ ಕಾರ್ಯವನ್ನು SIT ಆರಂಭಿಸಿದೆ. ಸಾಕ್ಷಿದಾರರು ತೋರಿಸಿದ ಮೊದಲ ಸ್ಥಳವು ನೇತ್ರಾವತಿ ನದಿಯ ದಡದಲ್ಲೇ ಇದೆ. ನದಿ ಮತ್ತು ಅಗೆಯುತ್ತಿರುವ ಜಾಗದ ನಡುವೆ ಕೇವಲ 10 ಮೀಟರ್ ಅಂತರವಿದ್ದು, ಇದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನದಿಯ ನೀರಿನಿಂದಾಗಿ ಮಣ್ಣು ಸಡಿಲಗೊಳ್ಳುವ ಸಾಧ್ಯತೆ ಇದ್ದು, ಮೃತದೇಹಗಳ ಪತ್ತೆ ಕಾರ್ಯವು ಮತ್ತಷ್ಟು ಕ್ಲಿಷ್ಟಕರವಾಗಲಿದೆ.

Tags:    

Similar News