ಎಲ್ಲಾ ಎಸ್ ಟಿ ವಸತಿ ಶಾಲೆಗಳಿಗೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ನಾಮಕರಣ: ಸಿಎಂ ಸಿದ್ದರಾಮಯ್ಯ ಘೋಷಣೆ

ʻʻರಾಜ್ಯದ ಎಲ್ಲಾ ಸರ್ಕಾರಿ ವಸತಿ ಶಾಲೆಗಳನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆʼʼ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಹತ್ವದ ಘೋಷಣೆ ಮಾಡಿದರು.

Update: 2024-10-17 10:29 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ʻʻರಾಜ್ಯದ ಎಲ್ಲಾ ಸರ್ಕಾರಿ ವಸತಿ ಶಾಲೆಗಳನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆʼʼ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಹತ್ವದ ಘೋಷಣೆ ಮಾಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ  ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ವಾಲ್ಮೀಕಿ ಅವರ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ  ಬಳಿಕ ಮಾತನಾಡಿದರು.  

 ಪರಿಶಿಷ್ಟ ಪಂಗಡಗಳ ಎಲ್ಲಾ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ನಾಮಕರಣ ಮಾಡಲಾಗುವುದು. ಪರಿಶ್ರಮದ ಮೂಲಕ ಸಾಧನೆಯ ಶಿಖರವನ್ನೇರಿದ ವಾಲ್ಮೀಕಿಯವರ ಹೆಸರು ಮತ್ತು ಬದುಕು ಅಜರಾಮರವಾಗಲಿ ಎಂಬುದು ನನ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. 

ಸಮಪಾಲು, ಸಮಬಾಳು, ಸಮಾನ ಅವಕಾಶ

ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿಯವರು ವಾಲ್ಮೀಕಿ ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿಯವರು ರಾಮಾಯಣ ಬರೆಯಲು ಸಾಧ್ಯವಾ? ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಾ ಹೊತ್ತಲ್ಲೇ ಸಂಸ್ಕೃತ ಕಲಿತು, ಶ್ಲೋಕಗಳ ಮೂಲಕ ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ಯ ಬರೆದರಲ್ಲಾ ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ. ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು, ಬರೆದರು. ಜಗತ್ತಿಗೇ ಪ್ರೇರಣೆ ಆದರು. ವಾಲ್ಮೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ.ರಾಮನ‌ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಎಂದು ಅವರು ಹೇಳಿದರು. 

ಒಂದೇ ಒಂದು ರಾಜ್ಯದಲ್ಲಾಗಲೀ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ. ಕೇಂದ್ರದಲ್ಲಿರುವ ಬಿಜೆಪಿ  ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾಗಲೀ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. 

ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ

ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದ ಹೊರತು ಸಮಾನತೆ ಬರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ. ನಮ್ಮ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಇದನ್ನು ವಿರೋಧಿಸಿದವರು ಬಿಜೆಪಿಯವರು. ಆದ್ದರಿಂದ ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ. ನಾವು ಜಾರಿಗೊಳಿಸಿದ ಬಡ್ತಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು ನಾಡಿನ‌ ಜನತೆ ಅರ್ಥಮಾಡಿಕೊಳ್ಳಬೇಕು. ನಾನು ಹೇಳಿದ್ದೀನಿ ಎನ್ನುವ ಕಾರಣಕ್ಕೆ ನೀವು ಇದನ್ನೆಲ್ಲಾ ನಂಬಬೇಡಿ. ಸತ್ಯ, ಸುಳ್ಳನ್ನು ಪರಾಮರ್ಷಿಸಿ, ವಿವೇಚಿಸಿ. ಸತ್ಯವನ್ನು ಧೈರ್ಯವಾಗಿ-ಬಹಿರಂಗವಾಗಿ ಮಾತಾಡುವ ಧೈರ್ಯವನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಬೆಳೆಸಿಕೊಳ್ಳಬೇಕು. ಇದೇ ಮಹರ್ಷಿ ವಾಲ್ಮೀಕಿ ಅವರಿಗೆ ನಾವು, ನೀವು ಸಲ್ಲಿಸುವ ಗೌರವ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಸಮುದಾಯದ ಮಠದ ಜಗದ್ಗುರು ಪ್ರಸನ್ನಾ ನಂದಪುರಿ ಶ್ರೀ, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಹೆಚ್.ಕೆ.ಪಾಟೀಲ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವನಗೌಡ ದದ್ದಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, KKRDB ಅಧ್ಯಕ್ಷರಾದ ಅಜಯ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ಸೇರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.‌

Tags:    

Similar News