ಮಡಿಕೇರಿ ವಸತಿ ಶಾಲೆ ಅಗ್ನಿ ದುರಂತ: ಅನುಮತಿಯೇ ಇಲ್ಲದೆ ನಡೆಯುತ್ತಿತ್ತು ಹಾಸ್ಟೆಲ್‌

ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿದಂತೆ ಶಾಲೆಯು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ದೃಢಪಟ್ಟಿದೆ.

Update: 2025-10-10 10:29 GMT

ಮಡಿಕೇರಿ ಅಗ್ನಿದುರಂತ ಪ್ರಕರಣ

Click the Play button to listen to article

ಮಡಿಕೇರಿಯ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ನಡೆದಿದ್ದ ಅಗ್ನಿ ದುರಂತ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ತನಿಖೆಯ ವೇಳೆ, ಈ ವಸತಿ ಶಾಲೆಯನ್ನು ಯಾವುದೇ ಅನುಮತಿಯಿಲ್ಲದೆ ನಡೆಸಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿದಂತೆ ಶಾಲೆಯು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ದೃಢಪಟ್ಟಿದೆ. ದೆಹಲಿ ಮೂಲದ ಒಬ್ಬ ಉದ್ಯಮಿ ಈ ಶಾಲೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಪುರಾತನ ಮನೆಯೊಂದರಲ್ಲಿ ನಡೆಸಲಾಗುತ್ತಿದ್ದ ಈ ವಸತಿ ಶಾಲೆಗೆ ಒಟ್ಟು 102 ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು. ಅವರ ಪೈಕಿ 70 ಮಕ್ಕಳು ಶಾಲೆಯ ಆವರಣದಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಕೇವಲ ನಾಲ್ಕು ಕೋಣೆಗಳಿದ್ದ ಈ ಮನೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಉಚಿತ ಶಿಕ್ಷಣದ ಹೆಸರಿನಲ್ಲಿ ವಸತಿ ಶಾಲೆ ನಡೆಸುತ್ತಿದ್ದರೂ, ಇಲ್ಲಿ ಮಕ್ಕಳಿಗೆ ವಸತಿ ನೀಡುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಗೆ ಸುಳ್ಳು ದೃಢೀಕರಣ ನೀಡಿತ್ತು ಎಂದು ತಿಳಿದುಬಂದಿದೆ. 

ಘಟನೆ ಏನು? 

ಗುರುವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಶಾಲಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತದಲ್ಲಿ ಎರಡನೇ ತರಗತಿಯ ಬಾಲಕ ಸ್ಥಳದಲ್ಲೇ ಮೃತಪಟ್ಟದ್ದ. ಮೃತ ಬಾಲಕನ್ನು ಭಾಗಮಂಡಲ ಸಮೀಪದ ಚೆಟ್ಟಿಮಾನಿ ನಿವಾಸಿ ಪುಷ್ಪಕ್‌ ಎಂದು ಗುರುತಿಸಲಾಗಿದೆ. ಆದರೆ ಇಬ್ಬರು ಬಾಲಕರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿತ್ತು.

ಹೊಗೆಯಿಂದ ಎಚ್ಚೆತ್ತ ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರು ತಕ್ಷಣವೇ ಕಿರುಚಾಡಿ ಎಲ್ಲಾ ಮಕ್ಕಳನ್ನು ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದರು. ಆದರೆ, ಬಾಗಿಲು ತೆರೆದುಕೊಂಡಿರಲಿಲ್ಲ. ಕಿಟಕಿಯ ಗಾಜನ್ನು ಒಡೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಹಾಗಾಗಿ, ಆ ಇಬ್ಬರು ತಕ್ಷಣವೇ ಮತ್ತೊಂದು ಕೋಣೆಗೆ ಓಡಿಹೋಗಿ ಅಲ್ಲಿನ ಕಿಟಕಿಯ ಬಾಗಿಲನ್ನು ತೆರೆದು ಉಳಿದ ಮಕ್ಕಳನ್ನು ಹೊರಕ್ಕೆ ಸುರಕ್ಷಿತವಾಗಿ ದಾಟಿಸಿದ್ದರು. ದುರದೃಷ್ಟವಶಾತ್, ಬಾಲಕ ಪುಷ್ಪಕ್ ಮಾತ್ರ ಹೊರಬರಲಾರದೆ ಬೆಂಕಿಗೆ ಆಹುತಿಯಾಗಿದ್ದನು. 

Tags:    

Similar News