Mysore MUDA Case | ಮಾಜಿ ಆಯುಕ್ತ ನಟೇಶ್‌ಗೆ ಲೋಕಾಯುಕ್ತ ನೋಟಿಸ್
ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧ ವಿಚಾರಣೆಗೆ ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ.
ಗೃಹ ಇಲಾಖೆ ವಿಚಾರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ, ನಟೇಶ್ ಅವರಿಗೆ ನೋಟಿಸ್ ನೀಡಿದ್ದು, ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಡಾ ಆಯುಕ್ತರಾಗಿದ್ದ ವೇಳೆ, ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪ ನಟೇಶ್ ಅವರ ಮೇಲಿದೆ. ಹೈಕೋರ್ಟ್ ಸೂಚನೆಯಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ, ನಟೇಶ್ ಅವರ ವಿಚಾರಣೆಗೆ ನಿಯಮದಂತೆ ಸರ್ಕಾರದ ಅನುಮತಿ ಪಡೆಯಬೇಕಿತ್ತು. ಆ ಹಿನ್ನೆಲೆಯಲ್ಲಿ ತಿಂಗಳ ಹಿಂದೆಯೇ ಅನುಮತಿ ಕೋರಿ ಲೋಕಾಯುಕ್ತ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದೀಗ ಗೃಹ ಇಲಾಖೆ ಅನುಮತಿ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಲಾಗಿದೆ.
ನಟೇಶ್ ಈಗಾಗಲೇ ಮೂರು ಬಾರಿ, ಪ್ರಕರಣದ ಪರ್ಯಾಯ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ಹಾಜರಾಗಿದ್ದಾರೆ.
ಅಲ್ಲದೆ, ಬೆಂಗಳೂರಿನ ಮಲ್ಲೇಶ್ವರಂನ 10ನೇ ತಿರುವಿನಲ್ಲಿರುವ ನಟೇಶ್ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು.
ಗುತ್ತಿಗೆ ನೌಕರನ ವಜಾ
ಈ ನಡುವೆ, ಮುಡಾ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಗುತ್ತಿಗೆ ನೌಕರ ಬಿ ಕೆ ಕುಮಾರ್ ಎಂಬಾತನನ್ನು ಸೇವೆಯಿಂದ ವಜಾ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಆತ ಮಾಜಿ ಆಯುಕ್ತರಾದ ನಟೇಶ್ ಮತ್ತು ದಿನೇಶ್ ಅವರಿಗೆ ಅಕ್ರಮದಲ್ಲಿ ನೆರವು ನೀಡಿದ್ದ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಗಾಗಿದ್ದ ಎನ್ನಲಾಗಿದೆ.