ಲೋಕಾಯುಕ್ತ ದಾಳಿ | ರಾಜ್ಯದ 13 ಅಧಿಕಾರಿಗಳ 60 ಸ್ಥಳದಲ್ಲಿ ಶೋಧ

ಲೋಕಾಯುಕ್ತ ಪೊಲೀಸರು ಕರ್ನಾಟಕದಾದ್ಯಂತ ಬುಧವಾರ ಬೆಳಿಗ್ಗೆ ವಿವಿಧ ಇಲಾಖೆಗೆ ಸೇರಿದ 13 ಅಧಿಕಾರಿಗಳಿಗೆ ಸಂಬಂಧಿಸಿದ 60 ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

Update: 2024-03-27 08:25 GMT
ಲೋಕಾಯುಕ್ತ

ಲೋಕಾಯುಕ್ತ ಪೊಲೀಸರು ಕರ್ನಾಟಕದಾದ್ಯಂತ ಬುಧವಾರ ಬೆಳಿಗ್ಗೆ ವಿವಿಧ ಇಲಾಖೆಗೆ ಸೇರಿದ 13 ಅಧಿಕಾರಿಗಳಿಗೆ ಸಂಬಂಧಿಸಿದ 60 ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಯಲಹಂಕ ವಲಯದ ಮುಖ್ಯ ಎಂಜಿನಿಯರ್ ರಂಗನಾಥ್ ಎಸ್.ಪಿ., ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ ಹಾಗೂ ಅಬಕಾರಿ ಇಲಾಖೆಯ ಉಡುಪಿ ಉಪ ಆಯುಕ್ತೆ ರೂಪಾ ಸೇರಿದಂತೆ ಕರ್ನಾಟಕದ 13 ಪ್ರಮುಖ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ಸಹಾಯಕ ಎಂಜಿನಿಯರ್ ಫಯಾಝ್ ಅಹಮದ್, ಉತ್ತರ ಕನ್ನಡದ ಕಿರಿಯ ಎಂಜಿನಿಯರ್ ಪ್ರಕಾಶ್, ಧಾರವಾಡದ ವಲಯ ಅರಣ್ಯ ಅಧಿಕಾರಿ ಮಹೇಶ್ ಚಂದ್ರಯ್ಯ ಹಿರೇಮಠ, ಬಿಡದಿ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯತೀಶ್, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ವಿಜಯಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಬೀದರ್ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಸ್ವಾಮಿ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸದಾಶಿವಯ್ಯ, ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸದಾಶಿವ ಜಯಪ್ಪ ಹಾಗೂ ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ ಕೃಷ್ಣಗೌಡ ಅವರಿಗೆ ಸೇರಿದ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ 13 ಎಸ್‌ಪಿಗಳು, 12 ಡಿವೈಎಸ್‌ಪಿಗಳು ಹಾಗೂ 25 ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 130 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Tags:    

Similar News