ಅಕ್ರಮ ಆಸ್ತಿ ಪ್ರಕರಣ | ಸಚಿವ ಜಮೀರ್ ಅಹ್ಮದ್‌ಗೆ ಲೋಕಾಯುಕ್ತ ನೋಟಿಸ್‌

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಸೆಂಬರ್ 3 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ.;

Update: 2024-11-16 10:48 GMT
ಸಚಿವ ಜಮೀರ್ ಅಹ್ಮದ್ ಖಾನ್‌

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಡಿಸೆಂಬರ್ 3 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಜಮೀರ್‌ ಅವರ ಮನೆಗೆ ತೆರಳಿ ಲೋಕಾಯುಕ್ತ ಇನ್‌ಪೆಕ್ಟ‌ರ್ ನೊಟೀಸ್ ನೀಡಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು. ಬಳಿಕ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರಿದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ಹಂತದ ತನಿಖೆ ಮುಗಿಸಿದ ಪೊಲೀಸರು, ಈಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜಮೀರ್ ಖಾನ್, ತಮ್ಮ ಹಣಕಾಸು ವ್ಯವಹಾರದ ಕುರಿತು ಲೆಕ್ಕವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಕಾಲಾವಕಾಶ ನೀಡಲಾಗಿದೆ. ಎಸಿಬಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಿದೆ. ಅದು ಈಗ ನನಗೆ ನೋಟಿಸ್ ನೀಡಿದೆ. ಇದು ಸಾಮಾನ್ಯ ನೋಟಿಸ್. ಇದರಲ್ಲಿ ಹೊಸದೇನೂ ಇಲ್ಲ ಎಂದು ಜಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.

Tags:    

Similar News