ಬೆಂಗಳೂರು ದಕ್ಷಿಣಕ್ಕೆ ಕುಣಿಗಲ್‌; ಸಿಎಂ ಕಚೇರಿಗೆ ಬಂದ ಅರ್ಜಿಯ ಹಿಂದೆ ಡಿಕೆಶಿ ಕೈವಾಡದ ಶಂಕೆ, ಏನಿದರ ಹಕೀಕತ್ತು?

ಬೆಂಗಳೂರು ದಕ್ಷಿಣ ಜಿಲ್ಲೆಗೆ (ರಾಮನಗರ) ಕುಣಿಗಲ್‌ ತಾಲೂಕು ಸೇರಿಸಬೇಕೆಂಬ ಮನವಿಯೊಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿಗೆ ತಲುಪಿದ್ದು, ಮನವಿ ಕುರಿತಂತೆ ಕಂದಾಯ ಇಲಾಖೆಯ ವರದಿ ಕೇಳಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Update: 2025-10-03 08:30 GMT

ತುಮಕೂರಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕುಣಿಗಲ್ ತಾಲೂಕನ್ನು ಜಿಲ್ಲೆಯಿಂದ ಬೇರ್ಪಡಿಸುವ ಮಾತುಗಳು ಕಲ್ಪತರು ನಾಡಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿವೆ.

ಬೆಂಗಳೂರು ದಕ್ಷಿಣ ಜಿಲ್ಲೆಗೆ (ರಾಮನಗರ) ಕುಣಿಗಲ್‌ ತಾಲೂಕು ಸೇರಿಸಬೇಕೆಂದು ಬೆಂಗಳೂರಿನಲ್ಲಿ ವಾಸವಿರುವ ಕುಣಿಗಲ್‌ ಮೂಲದ ಕೆಲ ಉದ್ಯಮಿಗಳು ಸಿಎಂ ವಿಶೇಷ ಕರ್ತವ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಉದ್ಯಮಿ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಇಲಾಖೆಯ ವರದಿ ಕೇಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಕೆಲ ದಿನಗಳ ಹಿಂದೆ ತುಮಕೂರಿನಿಂದ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿ.ಕೆ.ಶಿವಕುಮಾರ್‌ ಅವರ ಕನಸಿನ ಯೋಜನೆಯಾದ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆಗೆ ತುಮಕೂರಿನ ನಾಗರಿಕರು ಹಾಗೂ ಜನಪ್ರತಿನಿಧಿಗಳು ಅಡ್ಡಿಪಡಿಸಿದ್ದರು. ಇದರಿಂದ ಡಿ.ಕೆ. ಶಿವಕುಮಾರ್‌ ಅವರಿಗೆ ಹಿನ್ನಡೆಯಾಗಿತ್ತು. ಈಗ ಇದೇ ಹಿನ್ನಡೆಗೆ ಪ್ರತಿಕಾರವಾಗಿ ಕುಣಿಗಲ್‌ ತಾಲೂಕನ್ನು ತವರು ಜಿಲ್ಲೆಗೆ ಸೇರಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬುದು ಕುಣಿಗಲ್‌ ತಾಲೂಕಿನ ಸಂಘ ಸಂಸ್ಥೆಗಳ ಆರೋಪವಾಗಿದೆ.  

ಏನಿದು ಕುಣಿಗಲ್‌ ವಿವಾದ? 

ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿರುವ ಕುಣಿಗಲ್‌ ತಾಲೂಕನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುವಂತೆ ಸೆ.18ರಂದು ಬೆಂಗಳೂರಿನಲ್ಲಿ ವಾಸವಿರುವ ಕುಣಿಗಲ್‌ ಮೂಲದ ಉದ್ಯಮಿಯೊಬ್ಬರು ಸಿಎಂ ಕಚೇರಿಗೆ ಪತ್ರ ಬರೆದಿದ್ದರು. ಸೆ.20 ರಂದು ಈ ಪತ್ರದ ಕುರಿತು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕಂದಾಯ ಇಲಾಖೆಯಿಂದ ವರದಿ ಕೇಳಿದ್ದರು. ಸಾಮಾನ್ಯವಾಗಿ ಯಾವುದೇ ಒಂದು ಮೂಗರ್ಜಿ ಸಿಎಂ ಕಚೇರಿ ಅಥವಾ ಇನ್ಯಾವುದೇ ಇಲಾಖೆಗಳಿಗೆ ಬಂದರೆ ಸತ್ಯಾಸತ್ಯತೆ ಪರಿಶೀಲಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಆದರೆ, ಇಲ್ಲಿ ಎರಡೇ ದಿನದಲ್ಲಿ ಪತ್ರ ವ್ಯವಹಾರಗಳು ನಡೆದಿರುವುದು ಸಂಶಯಕ್ಕೆ ಕಾರಣವಾಗಿದೆ. 

ಬೆಂಗಳೂರಿನಲ್ಲಿ ಪ್ರಕಾಶ್‌ ಮೂರ್ತಿ ಎಂಬುವರು ಈ ಮನವಿ ಸಲ್ಲಿಸಿದ್ದಾರೆ. ಇವರ ಮೂಲ ಕುಣಿಗಲ್‌ ತಾಲೂಕಾದರೂ ಹುಟ್ಟಿ ಬೆಳೆದು, ವಾಸವಿರುವುದು ಬೆಂಗಳೂರಿನಲ್ಲಿ. ಇಂತಹವರ ಮನವಿಗೆ ಅಧಿಕಾರಿಗಳು ಪ್ರಾಮುಖ್ಯತೆ ನೀಡಿರುವುದರಿಂದ ಹಿಂದೆ ಯಾರ ಕೈವಾಡವಿದೆ ಎಂಬ ಅನುಮಾನ ಕಾಡುತ್ತಿದೆ. ಉದ್ಯಮಿಯೊಬ್ಬರ ಮನವಿಗೆ ತ್ವರಿತವಾಗಿ ಸ್ಪಂದಿಸುತ್ತಿರುವ ಸರ್ಕಾರ ಧೋರಣೆ ವಿರೋಧಿಸಿ ಅ.3 ರಂದು ಕುಣಿಗಲ್‌ ಅಸ್ಮಿತೆ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾಹಿತಿಗಳು, ಹೋರಾಟಗಾರರು ಸಭೆ ನಡೆಸಲಿದ್ದೇವೆ ಎಂದು ಸಮಿತಿಯ ಮುಖಂಡ ನಾಗಣ್ಣ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.  

 

ಕ್ಷೇತ್ರ ಪುನರ್‌ವಿಂಗಡಣೆ ಮೇಲೆ ಕಣ್ಣು?

2028 ಕ್ಕೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆಯಲಿದ್ದು, ಕುಣಿಗಲ್‌ ತಾಲೂಕು ಒಳಗೊಂಡಂತೆ ಪ್ರತ್ಯೇಕ ಕ್ಷೇತ್ರ ರಚನೆಯ ಮಾತುಗಳು ಹರಿದಾಡುತ್ತಿವೆ. ಹೀಗಿರುವಾಗ ಕುಣಿಗಲ್‌ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಿದರೆ, ಹೊಸ ಕ್ಷೇತ್ರ ರಚನೆಯಾಗಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋತಿರುವ ಸೋದರ ಡಿ.ಕೆ. ಸುರೇಶ್‌ ಅವರಿಗೆ ಇದೇ ಕ್ಷೇತ್ರದಿಂದ ರಾಜಕೀಯ ಪುನರ್‌ ಜನ್ಮ ಸಿಗಬಹುದು ಎಂಬ ಆಲೋಚನೆ ಡಿ.ಕೆ. ಶಿವಕುಮಾರ್‌ ಅವರದ್ದಾಗಿದೆ. ಈ ಕಾರ್ಯತಂತ್ರವನ್ನು ತಮ್ಮ ಸಂಬಂಧಿಯೂ ಆದ ಡಾ. ರಂಗನಾಥ್‌ ಮೂಲಕ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಇನ್ನು ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ತವರು ಜಿಲ್ಲೆ ಹಾಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಪಾರುಪತ್ಯ ಸ್ಥಾಪಿಸುವ ಉದ್ದೇಶವೂ ಡಿ.ಕೆ.ಶಿ ಅವರದ್ದಾಗಿದೆ ಎನ್ನಲಾಗಿದೆ.

ಹೇಮಾವತಿ ತಕರಾರಿಗೆ ತಿರುಗೇಟು

ಹೇಮಾವತಿ ಅಚ್ಚುಕಟ್ಟು ಪ್ರದೇಶವಾದ ತುಮಕೂರಿಗೆ 24 ಟಿಎಂಸಿ ನೀರು ಹಂಚಿಕೆಯಾಗಿದೆ. ಕುಣಿಗಲ್‌ ತಾಲೂಕಿಗೆ 3.3 ಟಿಎಂಸಿ ನೀರು ಹಂಚಿಕೆಯಾಗಿದೆ. ಕುಣಿಗಲ್‌ ದೊಡ್ಡಕೆರೆ(ಕುಣಿಗಲ್‌ ಕೆರೆ)ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಾಗಿ ಇರಿಸಿರುವುದರಿಂದ ನಿಗದಿ ನೀರು ಪಡೆಯಲು ಕುಣಿಗಲ್‌ಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅಚ್ಚು ಕಟ್ಟು ಪ್ರದೇಶವನ್ನು ಕೇವಲ ೫೦ ಸಾವಿರ ಎಕರೆ ಎಂದು ತೋರಿಸಲಾಗಿದೆ.  ಕುಣಿಗಲ್‌ ಪಾಲಿನ ನೀರನ್ನು ಮಾಗಡಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಘಟನೋತ್ತರ ಅನುಮೋದನೆ ನೀಡಿದೆ. 

ಈ ನೀರನ್ನು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಯಡಿ ಪೈಪ್‌ಲೈನ್‌ ಮೂಲಕ ಕೊಂಡೊಯ್ಯಲು ಡಿ.ಕೆ. ಶಿವಕುಮಾರ್‌ ನಿರ್ಧರಿಸಿ, ಯೋಜನೆಗೂ ಚಾಲನೆ ಕೊಡಿಸಿದ್ದರು. ಆದರೆ, ಕುಣಿಗಲ್‌ನಿಂದ ನೀರನ್ನು ಮಾಗಡಿಗೆ ಪೂರೈಸಲಾಗುತ್ತಿದೆ ಎಂಬ ಸುದ್ದಿ ಬಹಿರಂಗವಾಗಿ ತುಮಕೂರಿಗರಿಂದ ಬೃಹತ್‌ ಹೋರಾಟ ನಡೆಯಿತು. ಯೋಜನೆಗೆ ಅಡ್ಡಿಪಡಿಸಲಾಯಿತು. ಇದನ್ನೇ ನೆಪ ಮಾಡಿಕೊಂಡು ಡಿ.ಕೆ. ಶಿವಕುಮಾರ್‌ ಅವರು ಕುಣಿಗಲ್‌ ತಾಲೂಕನ್ನೇ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ನಾಗಣ್ಣ ಹಾಗೂ ಇತರ ಮುಖಂಡರು ಆರೋಪಿಸಿದ್ದಾರೆ. 

ಡಿಕೆಶಿ ಹುನ್ನಾರಕ್ಕೆ ಶಾಸಕರ ಸಹಕಾರ?

ಕುಣಿಗಲ್‌ ತಾಲೂಕನ್ನು ತುಮಕೂರಿನಿಂದ ಬೇರ್ಪಡಿಸಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಮನವಿಗೆ ಶಾಸಕರು ಚಕಾರ ಎತ್ತದಿರುವುದು ಸೋಜಿಗ ಮೂಡಿಸಿದೆ. 

ಉದ್ಯಮಿಯೊಬ್ಬರ ಮನವಿ ಕುರಿತಂತೆ ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ್ದ  ಡಾ. ರಂಗನಾಥ್‌, ತುಮಕೂರಿನಿಂದ ಕುಣಿಗಲ್‌ ಕಡೆಗಣಿಸಲಾಗಿದೆ. ನೀರಾವರಿ, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬೆಂಗಳೂರು ದಕ್ಷಿಣ ಸೇರ್ಪಡೆಗೆ ಸಹಕರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಶಾಸಕ ಡಾ.ರಂಗನಾಥ್‌ ಅಧಿಕಾರಕ್ಕೆ ಬಂದ ನಂತರ ಕುಣಿಗಲ್‌ ಸ್ಟಡ್‌ ಫಾರಂ ಜಾಗದಲ್ಲಿ ಟೌನ್‌ಶಿಪ್‌ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ತೀವ್ರ ಹೋರಾಟದ ಬಳಿಕ ಪ್ರಸ್ತಾವನೆ ಕೈ ಬಿಡಲಾಯಿತು. ಹೇಮಾವತಿ ನೀರನ್ನು ಮಾಗಡಿಗೆ ಹರಿಸಲು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ, ತುಮಕೂರಿನಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಕಾಟಾಚಾರಕ್ಕೆ ವಿರೋಧಿಸಿದರು. ಈಗ ಕುಣಿಗಲ್‌ ತಾಲೂಕನ್ನೇ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಮೂಗರ್ಜಿಗೆ ತಕರಾರು ತೆಗೆದಿಲ್ಲ ಎಂದು ಸ್ಥಳೀಯ ಹೋರಾಟಗಾರರು ದೂರಿದ್ದಾರೆ.

ತುಮಕೂರಿನಿಂದ ಕುಣಿಗಲ್‌ ತಾಲೂಕನ್ನು ಬೇರ್ಪಡಿಸುವ ವಿಚಾರದ ಕುರಿತು ಜನಜಾಗೃತಿ ಮೂಡಿಸಲಾಗುವುದು. ತುಮಕೂರು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಸಂಪರ್ಕಿಸಿ, ಹೋರಾಟ ರೂಪಿಸಲಾಗುವುದು. ಈಗಾಗಲೇ ಕುಣಿಗಲ್‌ನಲ್ಲಿ ಮಾಜಿ ಶಾಸಕ ಕೃಷ್ಣಕುಮಾರ್‌, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಾಳೆ ಮುಂದಿನ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಲಾಗುವುದು ಎಂದು ಕುಣಿಗಲ್‌ ಅಸ್ಮಿತೆ ಹೋರಾಟ ಸಮಿತಿ ಮುಖಂಡ ನಾಗಣ್ಣ ತಿಳಿಸಿದರು. 

Tags:    

Similar News